ಮುಖ್ಯ ವಾಹಿನಿಗೆ ಬರುವ ನಕ್ಸಲರಿಗೆ ಅವಕಾಶ ಕಲ್ಪಿಸಬೇಕು : ದಿನೇಶ್ ಗುಂಡೂರಾವ್

ಬೆಂಗಳೂರು : ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಯಾರೊಬ್ಬರೂ ಪ್ರೋತ್ಸಾಹ ನೀಡುತ್ತಿಲ್ಲ. ಹಿಂಸಾ ಮಾರ್ಗ ತ್ಯಜಿಸಿ ಮುಖ್ಯ ವಾಹಿನಿಗೆ ಬರುತ್ತೇವೆ ಎಂದರೆ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸುನೀಲ್ ಕುಮಾರ್ ಮಾತನಾಡುತ್ತಿದ್ದ ವೇಳೆ ಅವರು ಮಧ್ಯಪ್ರವೇಶಿಸಿ ಮಾತನಾಡಿದರು.
ನಕ್ಸಲರು ಶರಣಾಗತಿ ಆಗಬಾರದೇ? ಹಿಂಸಾ ಕೃತ್ಯಗಳಲ್ಲೆ ಇರಬೇಕಾ? ನಕ್ಸಲರು ಶರಣಾಗತಿ ಆಗುತ್ತಿರುವುದು ಕೇವಲ ನಮ್ಮ ರಾಜ್ಯದಲ್ಲಲ್ಲ. ತೆಲಂಗಾಣ, ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಶರಣಾಗಿದ್ದಾರೆ. ಹಲವರು ಸಂಸದರು, ಶಾಸಕರು ಆಗಿದ್ದಾರೆ. ಅವರು ಮಾಡಿರುವ ಕೃತ್ಯಗಳನ್ನು ಯಾರು ಸಮರ್ಥಿಸುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇದಕ್ಕು ಮುನ್ನ ಮಾತನಾಡಿದ ಸುನೀಲ್ ಕುಮಾರ್, ನಕ್ಸಲ್ ನಿಗ್ರಹ ದಳದವರು ಕೂಂಬಿಂಗ್ ಕಾರ್ಯಾಚರಣೆ ನಡೆಸಿದರೆ ನಕ್ಸಲರು ಸಿಗುವುದಿಲ್ಲ. ಆದರೆ, ಮುಖ್ಯಮಂತ್ರಿ ಕಚೇರಿಯಿಂದ ಒಂದು ಟ್ವಿಟ್ ಮಾಡುತ್ತಿದ್ದಂತೆ ಎರಡು ದಿನಗಳಲ್ಲಿ ನಕ್ಸಲರು ಶರಣಾಗತರಾಗುತ್ತಾರೆ. ಹಾಗಾದರೇ, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೂತಿರುವುದು ಯಾರು? ಎಂದು ಪ್ರಶ್ನಿಸಿದರು.
ಬಂದೂಕಿನ ನಳಿಗೆ ಮೂಲಕ ಅಧಿಕಾರವನ್ನು ಹಿಡಿಯುತ್ತೇವೆ ಎಂದು ಹೊರಟಿದ್ದ ನಕ್ಸಲರಿಂದ ನಾವು ನಮ್ಮ ಹತ್ತಾರು ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಭಾಷಣದಲ್ಲಿ ಹೇಳಿಸಿದ್ದಾರೆ. ಶಿವಮೊಗ್ಗ, ಉದಯಗಿರಿ, ಮಂಡ್ಯದಲ್ಲಿ ಆಗಿದ್ದು ಏನು? ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯರೊಬ್ಬರನ್ನು ಬೆಳಗಾವಿಯಲ್ಲಿ ಪೊಲೀಸ್ ವಾಹನದಲ್ಲಿ ಕೂರಿಸಿ 300-400 ಕಿ.ಮೀ. ಸುತ್ತಾಡಿಸಿದ್ದು ಏಕೆ? ಎಂದು ಪ್ರಶ್ನಿಸಿದ ಅವರು, ಒಂದರ್ಥದಲ್ಲಿ ಇಡೀ ಸರಕಾರವೇ ವೀಲ್ ಚೇರ್‍ನಲ್ಲಿದೆ ಎಂದು ಹೇಳಿದರು.