ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನ ʼಸಿಂಗಲ್ ವಿಂಡೋʼ ಮೂಲಕ ಬಳಸಲು ಚರ್ಚೆ: ಸಚಿವ ಎಚ್.ಸಿ. ಮಹದೇವಪ್ಪ
ಬೆಂಗಳೂರು: ಎಸ್‍ಸಿಎಸ್‍ಪಿ-ಟಿಎಸ್‍ಪಿ ಕಾಯ್ದೆಯಡಿ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ʼಸಿಂಗಲ್ ವಿಂಡೋʼ ಮೂಲಕ ಬಳಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಲಿತರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಿಟ್ಟ ಎಸ್‍ಸಿಎಸ್‍ಪಿ-ಟಿಎಸ್‍ಪಿ ಅನುದಾನವು ಸರಕಾರದ 31 ಇಲಾಖೆಗಳಿಗೆ ಹಂಚಿಕೆ ಆಗಿದೆ. ಅದನ್ನು ಸಿಂಗಲ್ ವಿಂಡೋ ಮೂಲಕ ನೀಡುವಂತಾಗಬೇಕು. ಆಗ ಮಾತ್ರ 5 ವರ್ಷದ ಅವಧಿಯಲ್ಲಿ ನಾವು ನಿರೀಕ್ಷಿಸಿದ ಬದಲಾವಣೆ ಕಾಣಲು ಸಾಧ್ಯ. ಈ ಬಗ್ಗೆ ನಾನು ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚಿಸಿದ್ದೇನೆ ಎಂದು ಅವರು ತಿಳಿಸಿದರು.
ಶೋಷಿತ ಸಮುದಾಯಗಳ ವಿದ್ಯಾವಂತ ಜನರು ತಮ್ಮ ಸಮುದಾಯಗಳನ್ನು ಬಲಪಡಿಸುವ ಮತ್ತು ಬಾಬಾ ಸಾಹೇಬರ ಆಶಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ರಾಜಕೀಯ ಪಕ್ಷಗಳ ದಾಳಗಾಳಾಗುತ್ತಿದ್ದಾರೆಯೇ ವಿನಾಃ ಅವರಿಗೆ ಸಲ್ಲಬೇಕಾದ ಸ್ಥಾನಗಳು ದೊರೆಯುತ್ತಿಲ್ಲ. ನಮ್ಮಲ್ಲಿ ಒಗ್ಗಟ್ಟು ಇಲ್ಲದ ಪರಿಸ್ಥಿತಿಯೇ ಇದಕ್ಕೆ ಕಾರಣ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂವಿಧಾನಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ನಮ್ಮ ಸರಕಾರ ಎಂದಿಗೂ ಹಿಂದೆ ಬಿದ್ದಿಲ್ಲ. ನಾವು ಜಾರಿಗೆ ತಂದಿದ್ದ ಎಸ್‍ಸಿಎಸ್‍ಪಿ-ಟಿಎಸ್‍ಪಿ ಕಾಯ್ದೆಯು ಇದಕ್ಕೆ ಉದಾಹರಣೆ ಆಗಿದ್ದು, ಸುಪ್ರೀಂ ಕೋರ್ಟ್ ಇದನ್ನು ‘ನೆಲದ ಕಾನೂನು’ ಎಂದು ಎತ್ತಿ ಹಿಡಿದಿದೆ ಎಂದು ಅವರು ನೆನಪಿಸಿಕೊಂಡರು.
ದಲಿತರು ಮತ್ತು ಅದರೊಳಗೆ ಇರುವ ಅಸ್ಪೃಶ್ಯ ಸಮುದಾಯಗಳು ಒಗ್ಗಟ್ಟಾಗದೇ ಇದ್ದರೆ ಅವರ ಆಶೋತ್ತರಗಳನ್ನು ಕೇಳುವವರು ಯಾರೂ ಇರುವುದಿಲ್ಲ. ಆದರೆ ಪರಿಶಿಷ್ಟ ಸಮುದಾಯಗಳ ದನಿಯನ್ನು ಯಾರಾದರೂ ಕೇಳಿಸಿಕೊಂಡರೆ ಅದು ಬಾಬಾ ಸಾಹೇಬರು ನೀಡಿದ ಈ ದೇಶದ ಸಂವಿಧಾನ ಮಾತ್ರ. ಅದು ಇರುವ ಕಾರಣದಿಂದಲೇ ಈ ದಿನ ನಾವು ನೀವು ಎಲ್ಲರೂ ಇದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.