ಬೆಂಗಳೂರಿಗೆ ಅಗತ್ಯಕ್ಕೆ ತಕ್ಕಂತೆ ಕಾವೇರಿ ನದಿ ನೀರು ಪೂರೈಸುವ ಕುರಿತು ಚರ್ಚೆ ನಡೆಯುತ್ತಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಮೂರ್ನಾಲ್ಕು ದಶಕಗಳಲ್ಲಿ ರಾಜ್ಯವು ಈ ರೀತಿಯ ಬರವನ್ನು ಕಂಡಿರಲಿಲ್ಲ. ಹೀಗಾಗಿ, ಮುಂದಿನ ಎರಡು ತಿಂಗಳು ತುಂಬಾ ಮುಖ್ಯವಾಗಿದ್ದು ನೀರಿನ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಲ್ಲಿ ನಾವು ಇಂತಹ ಬರವನ್ನು ನೋಡಿರಲಿಲ್ಲ. ಈ ಹಿಂದೆ ಬರಗಾಲವಿದ್ದರೂ ನಾವು ಇಷ್ಟು ದೊಡ್ಡ ಸಂಖ್ಯೆಯ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿರಲಿಲ್ಲ. 240 ತಾಲೂಕುಗಳಲ್ಲಿ 223 ರಲ್ಲಿ ಬರ ಎಂದು ಘೋಷಿಸಿದೆ. ಅವುಗಳಲ್ಲಿ 196 ತೀವ್ರ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ ಎಂದರು.
ನೀರಿನ ಬಿಕ್ಕಟ್ಟು ನಿಭಾಯಿಸಲು ಮತ್ತು ನಾಗರಿಕರಿಗೆ ನೀರು ಸರಬರಾಜು ಮಾಡಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ನಗರದಲ್ಲಿ ನೀರಿನ ‘ಮಾಫಿಯಾ’ ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನೂ, ಬೆಂಗಳೂರಿಗೆ ಅಗತ್ಯಕ್ಕೆ ತಕ್ಕಂತೆ ಕಾವೇರಿ ನದಿ ನೀರು ಪೂರೈಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಈ ವಿಷಯದಲ್ಲಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿವೆ. ರಾಜ್ಯ ಸರಕಾರ ತನ್ನ ಕಡೆಯಿಂದ ನೀರಿನ ಮಾಫಿಯಾವನ್ನು ನಿಯಂತ್ರಿಸಲು ಮತ್ತು ಖಾಸಗಿ ಬೋರ್‍ವೆಲ್‍ಗಳಿಂದ ನೀರು ತೆಗೆದುಕೊಂಡು ನೀರು ಒದಗಿಸಲು ಪ್ರಯತ್ನಿಸಿದೆ. ನೀರಿನ ಟ್ಯಾಂಕರ್ ಗಳು ಪ್ರಯಾಣಿಸುವ ದೂರವನ್ನು ಆಧರಿಸಿ ದರಗಳನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಆನ್‍ಲೈನ್ ವ್ಯವಸ್ಥೆಯನ್ನು ತರಲಾಗಿದ್ದು, ಇದರ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.