ನಕ್ಸಲ್ ನಿಗ್ರಹ ಪಡೆ ವಿಸರ್ಜನೆ: ಬಜೆಟ್ ನಲ್ಲಿ ಸಿಎಂ ಘೋಷಣೆ
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 10 ಕೋಟಿ ರೂ.ನ ವಿಶೇಷ ಪ್ಯಾಕೇಜ್

ಬೆಂಗಳೂರು: ಕರ್ನಾಟಕವು ನಕ್ಸಲ್ ಮುಕ್ತವಾಗಿರುವುದರಿಂದ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
2025-26ನೇ ಸಾಲಿನ ರಾಜ್ಯ ಆಯವ್ಯಯ ಮಂಡಿಸಿದ ಸಿದ್ದರಾಮಯ್ಯ, ನಮ್ಮ ಸರಕಾರದ ಅವಧಿಯಲ್ಲಿ ಆರು ಜನ ಭೂಗತ ನಕ್ಸಲರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿದ್ದಾರೆ. ಇದರೊಂದಿಗೆ ರಾಜ್ಯವು ನಕ್ಸಲ್ ಮುಕ್ತವಾಗಿದೆ. ಆದ್ದರಿಂದ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು ಎಂದು ಹೇಳಿದ್ದಾರೆ.
ಶರಣಾಗಿರುವ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳಿಸಲು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು 10 ಕೋಟಿ ರೂ. ವಿಶೇಷ ಪ್ಯಾಕೇಜ್ ರೂಪಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ನಂದಿ ಬೆಟ್ಟದ ಬಳಿ ಕೂಡುಗುರ್ಕಿ ಮತ್ತು ಕೆಜಿಎಫ್ ಬಳಿ ಎರಡು ಭಾರತೀಯ ಮೀಸಲು ಪೊಲೀಸ್ ಪಡೆಗಳನ್ನು ಸ್ಥಾಪಿಸಲು 80 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಸಿಎಂ ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಐದು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (Bomb Detection and Disposal Squad) ಕಾರ್ಯ ನಿರ್ವಹಿಸುತ್ತಿದ್ದು, ಪ್ರಸಕ್ತ ವರ್ಷ ಬಳ್ಳಾರಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಸಮಾಜದಲ್ಲಿ ಗಲಭೆ ಉಂಟು ಮಾಡುವವರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.