ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಿಸಿ: ಡಾ.ಪುರುಷೋತ್ತಮ ಬಿಳಿಮಲೆ
ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ಮೈಸೂರಿನಲ್ಲಿರುವ ಕೇಂದ್ರ ಭಾರತೀಯ ಭಾಷೆ ಸಂಸ್ಥೆಯ(ಸಿಐಐಎಲ್) ಅಧೀನದಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಿಸಿ, ಕೇಂದ್ರ ಸರಕಾರದಿಂದ ನೀಡಬೇಕಿರುವ ಎಲ್ಲ ಆರ್ಥಿಕ ಸಹಕಾರವನ್ನು ಒದಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದ್ದಾರೆ.
ಗುರುವಾರ ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಭಾರತೀಯ ಭಾಷೆ ಸಂಸ್ಥೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಮರ್ಪಕ ಕಾರ್ಯಚಟುವಟಿಕೆಗಳಿಗೆ ಕಾಯಕಲ್ಪವು ಅಗತ್ಯವಿದೆ. ಈ ಬಗ್ಗೆ ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್ ರವರೊಂದಿಗೆ ಚರ್ಚಿಸಲಾಗಿದೆ ಎಂದರು.
ಮೈಸೂರಿನ ಕೇಂದ್ರ ಭಾರತೀಯ ಭಾಷೆ ಸಂಸ್ಥೆಯು ತನ್ನ ಸ್ಥಾಪನೆಯನ್ನು ಅರ್ಥಪೂರ್ಣವಾಗಿಸಲು ಇನ್ನಷ್ಟು ತಂತ್ರಜ್ಞಾನ ಸ್ನೇಹಿಯಾಗಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಕೇಂದ್ರ ಸರಕಾರವು ಬೆಂಗಳೂರಿನಲ್ಲಿ ಈ ಸಂಸ್ಥೆಯ ತಂತ್ರಜ್ಞಾನ ಕಚೇರಿಯನ್ನು ತೆರೆಯಲು ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ಧಮೆರ್ಂದ್ರ ಪ್ರಧಾನ್ ನೀಡಿದ್ದಾರೆ ಎಂದು ಬಿಳಿಮೆಲೆ ಹೇಳಿದರು.
ಬ್ಯಾಂಕ್ ನೇಮಕಾತಿ ನ್ಯೂನ್ಯತೆಗಳ ಕಾರಣ ಸ್ಥಳೀಯರಿಗೆ ಅವಕಾಶ ದೊರಕುತ್ತಿಲ್ಲವೆಂಬ ಅಂಶವನ್ನು ಮನವರಿಕೆ ಮಾಡಲಾಗಿದೆ. ಸಚಿವರು ಈ ಕುರಿತಂತೆ ಸಚಿವೆ ನಿರ್ಮಾಲ ಸೀತರಾಮನ್ ಅವರೊಂದಿಗೆ ಚರ್ಚಿಸಲಾಗುವುದು ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು.
ಜವಾಹರ್ಲಾಲ್ ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಪೀಠಕ್ಕೆ ಪ್ರಾಧ್ಯಾಪಕರ ನೇಮಕಾತಿ ಆಗಿಲ್ಲದೇ ಇರುವ ಅಂಶದ ಕುರಿತಂತೆ ನಿಯೋಗದ ಮನವಿಯನ್ನು ಆಲಿಸಿದ ಸಚಿವರು ಸಂಬಂಧಪಟ್ಟವರಿಗೆ ಪತ್ರ ಬರೆದು ಕೂಡಲೇ ಕ್ರಮವಹಿಸಲು ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಕನ್ನಡ ಭಾಷೆ ಕಲಿಕಾ ಅಧಿನಿಯಮ 2015ರ ಅನುಷ್ಠಾನಕ್ಕಾಗಿ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಸೂಚನೆ ನೀಡಲಾಗುವುದು ಎಂದರು.
ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿರುವ ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಯುಜಿಸಿ ಅನುದಾನ ನಿಲ್ಲಿಸಿದ್ದರಿಂದ ಅದು ಮುಂಚುವ ಭೀತಿಯಲ್ಲಿದ್ದು, ಈ ಕೇಂದ್ರಕ್ಕೆ ಅನುದಾನ ನೀಡಲು ಕೇಂದ್ರ ಸರಕಾರವು ಮನಸ್ಸು ಮಾಡಬೇಕು ಎಂದು ಸಚಿವರನ್ನು ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರವು ಸಾಂಸ್ಕೃತಿಕ ಸಮಿತಿಗಳನ್ನು ರಚಿಸುವ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಪ್ರತಿಭಾನ್ವಿತ ಕಲಾವಿದರು, ಸಂಗೀತಗಾರರಿಗೆ ಆದ್ಯತೆಯ ಅವಕಾಶ ನೀಡಬೇಕೆಂದು ಕೋರಲಾಗಿದೆ. ಇದಕ್ಕೂ ಧಮೆರ್ಂದ್ರ ಪ್ರಧಾನ್ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಇದೇ ವೇಳೆ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಂಸದ ಎಲ್. ಹನುಮಂತಯ್ಯ, ಶಿಕ್ಷಣತಜ್ಞ ಹಿ.ಚಿ. ಬೋರಲಿಂಗಯ್ಯ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ವಿದ್ಯಾವರ್ಧಕ ಸಂಘ ಧಾರವಾಡದ ಶಂಕರ ಹಲಗತ್ತಿ, ಪ್ರಾಧಿಕಾರದ ಸದಸ್ಯರಾದ ವಿ.ಪಿ. ನಿರಂಜನಾರಾಧ್ಯ, ಎ.ಬಿ.ರಾಮಚಂದ್ರಪ್ಪ, ದಾಕ್ಷಾಯಿಣಿ ಹುಡೇದ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಅಧ್ಯಕ್ಷರ ಆಪ್ತಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್ ಇದ್ದರು.