‘ದೀಪಾವಳಿ’ ಮಾರ್ಗಸೂಚಿ ಪ್ರಕಟ | ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ : ಪೊಲೀಸ್ ಆಯುಕ್ತ ದಯಾನಂದ್
ಸಾಂದರ್ಭಿಕ ಚಿತ್ರ(PTI)
ಬೆಂಗಳೂರು : ದೀಪಾವಳಿ ಹಬ್ಬ ಹಿನ್ನೆಲೆ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಅದರಂತೆ ನಿಗದಿತ ಅವಧಿಯನ್ನು ಹೊರತುಪಡಿಸಿ ಪಟಾಕಿ ಸಿಡಿಸುವರ ವಿರುದ್ಧ ನಿಯಮ ಉಲ್ಲಂಘನೆ ಆರೋಪದಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯನಂದ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡಲು ನಗರದ 74 ನಿಗದಿತ ಮೈದಾನಗಳಲ್ಲಿ ತಾತ್ಕಾಲಿಕ ಅವಕಾಶ ನೀಡಲಾಗಿದೆ ಎಂದರು.
ಪಟಾಕಿ ಮಾರಾಟಕ್ಕೆ ಆನ್ಲೈನ್ನಲ್ಲಿ ಅರ್ಜಿ ಕರೆಯಲಾಗಿದ್ದು, ಅನುಮತಿ ಕೋರಿ ಬಂದಿದ್ದ 1,518 ಅರ್ಜಿಗಳ ಪೈಕಿ ಲಾಟರಿ ಮೂಲಕ 315 ಅರ್ಜಿಗಳನ್ನ ಪರಿಗಣಿಸಲಾಗಿದೆ. ಪಟಾಕಿ ಮಾರಾಟಕ್ಕೆ ನಿಗದಿತ ಸ್ಥಳಗಳಲ್ಲಿ ಎಸಿಪಿ ಮಟ್ಟದ ಓರ್ವ ಪೊಲೀಸ್ ಅಧಿಕಾರಿ, ಬಿಬಿಎಂಪಿ, ವಿದ್ಯುತ್ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳು ಹಾಜರಿರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದೂ ಉಲ್ಲೇಖಿಸಿದರು.
ಮಾರ್ಗಸೂಚಿ ಏನಿದೆ?: ಹಸಿರು ಪಟಾಕಿಗಳನ್ನು ಖರೀದಿಸಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು. ಹಸಿರು ಪಟಾಕಿಗಳನ್ನು ಖರೀದಿಸುವಾಗ ಅದರ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಖಚಿತಪಡಿಸಿಕೊಂಡು, ಖರೀದಿ ಮಾಡಬೇಕು.
ಉತ್ತಮ ಗುಣಮಟ್ಟದ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಅಂಗಡಿ, ಮಳಿಗೆಗಳಿಂದ ಖರೀಸಬೇಕು. ದೀಪಾವಳಿ ಸಮಯದಲ್ಲಿ ಅನಧಿಕೃತವಾಗಿ ಪಟಾಕಿಗಳನ್ನು ಮಾರುವ ಅಂಗಡಿಗಳಿಂದ ಖರೀದಿಸಬಾರದು. ಅತಿ ಹೆಚ್ಚು ಶಬ್ದ ಹಾಗೂ ವಾಯುಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಖರೀದಿಸಬಾರದು.
ಹಳೆಯ ಹಾಗೂ ಹಾಳಾದ ಪಟಾಕಿಗಳನ್ನು ಕೊಂಡುಕೊಳ್ಳಬಾರದು ಮತ್ತು ಅವುಗಳನ್ನು ಬಳಸಬಾರದು. ಪಟಾಕಿಗಳನ್ನು ಚಿಕ್ಕ ಮಕ್ಕಳು ಹಚ್ಚಲು ಅವಕಾಶ ಮಾಡಿಕೊಡಬೇಡಿ. ಚಿಕ್ಕ ಮಕ್ಕಳೊಂದಿಗೆ ಅವರ ಪೋಷಕರೂ ಸಹ ಜೊತೆಯಲ್ಲಿದ್ದು, ಸುರಕ್ಷಿತವಾಗಿ ಪಟಾಕಿ ಹಚ್ಚುವಂತೆ ಗಮನ ಹರಿಸಬೇಕು.
ಚಿಕ್ಕ ಮಕ್ಕಳು ಹೆಚ್ಚು ಅಪಾಯಕಾರಿಯಾದ ಪಟಾಕಿಗಳನ್ನು ಹಚ್ಚದಂತೆ ನೋಡಿಕೊಳ್ಳುವುದು. ಹಾಗೂ ಪಟಾಕಿಗಳನ್ನು ಹಚ್ಚುವಾಗ ದೂರದಲ್ಲಿ ನಿಂತು ನೋಡುವಂತೆ ವ್ಯವಸ್ಥೆ ಮಾಡುವುದು.
ಪಟಾಕಿಗಳನ್ನು ಸಿಡಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ನಂದಿಸುವ ಕೆಲಸವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಬೇಕು. ಹಾಗೂ ಬಳಸಿದ ಪಟಾಕಿಗಳನ್ನು ಬಕೇಟ್ನಲ್ಲಿಟ್ಟು ಅದಕ್ಕೆ ಮರಳು ಅಥವಾ ನೀರನ್ನು ಹಾಕಿ ನಂದಿಸಬೇಕು.
ಪಟಾಕಿ ಸಿಡಿಸುವ ಸಂದರ್ಭದಲ್ಲಿ ಯಾವುದಾದರೂ ಅವಘಡಗಳು ಸಂಭವಿಸಿದಲ್ಲಿ ತಕ್ಷಣವೇ 112 ಹಾಗೂ 108 ಸಹಾಯವಾಣಿಯನ್ನ ಸಂಪರ್ಕಿಸುವುದು ಹಾಗೂ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಬಿಬಿಎಂಪಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣಾ ಇಲಾಖೆಗಳಿಂದ ನೀಡಿರುವ ಆದೇಶಗಳು ಹಾಗೂ ಸಲಹಾ-ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸುವುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.