ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯ: ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯವಾಗಿದೆ. ಕಸದ ವಿಚಾರವಾಗಿ ಬೆಂಗಳೂರು ಶಾಸಕರುಗಳೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಶುಕ್ರವಾರ ಪರಿಷತ್‍ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ಕಸ ಅನ್ನುವುದು ದೊಡ್ಡ ಮಾಫಿಯಾ. ಕಸದ ವಿಚಾರವಾಗಿ ಬೆಂಗಳೂರು ಶಾಸಕರುಗಳೇ ಬೆದರಿಕೆ ಹಾಕುತ್ತಿದ್ದಾರೆ. ಇದರಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ನಾನು ಅವರ ಹೆಸರು ಹೇಳಲು ಬಯಸುವುದಿಲ್ಲ. ಅಭಿವೃದ್ಧಿಗಾಗಿ ಅವರ ಕ್ಷೇತ್ರಕ್ಕೆ 800ಕೋಟಿ ರೂ.ನೀಡಬೇಕು ಎಂದು ಕೇಳುತ್ತಿದ್ದಾರೆ. ಮೂರು ದಿನಗಳಿಂದ ಮಹದೇವಪುರದಲ್ಲಿ ಕಸದ ಗಾಡಿಗಳು ನಿಂತಿವೆ ಎಂದರು.
ಬೆಂಗಳೂರು ವ್ಯಾಪ್ತಿಯಿಂದಲೇ ಕಸ ಹೋಗಬೇಕು ಅನ್ನುವುದು ನನ್ನ ಇಚ್ಚೆ. ಇದಕ್ಕಾಗಿ ಬೆಂಗಳೂರು ಹೊರಗೆ ಕಸ ಹಾಕಲು ಜಾಗ ಹುಡುಕುತ್ತಿದ್ದೇವೆ. ತಮಿಳುನಾಡು, ಆಂಧ್ರ ಪ್ರದೇಶ, ಹೊಸದಿಲ್ಲಿಯಲ್ಲಿ ವ್ಯವಸ್ಥೆ ನೋಡಿದ್ದೇನೆ. ಕಸದ ಸಮಸ್ಯೆಗೆ ಪರಿಹಾರ ಮಾಡಲು ಕ್ರಮವಹಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.