ಜೆಡಿಎಸ್ ಚಿಹ್ನೆ ತೆನೆ ಹೊತ್ತ ಮಹಿಳೆಯಲ್ಲ, ಪೆನ್‍ಡ್ರೈವ್ ಹೊತ್ತ ಮಹಿಳೆ : ಡಿ.ಕೆ.ಸುರೇಶ್
ಬೆಂಗಳೂರು: ‘ಜಾತ್ಯತೀತ ಜನತಾ ದಳ(ಜೆಡಿಎಸ್) ಚಿಹ್ನೆ ತೆನೆ ಹೊತ್ತ ಮಹಿಳೆ ಅಲ್ಲ, ಬದಲಾಗಿ ಪೆನ್‍ಡ್ರೈನ್ ಹೊತ್ತ ಮಹಿಳೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನಮ್ಮ ಕುಟುಂಬದ ಬಗ್ಗೆ ಏನೇ ಹೇಳಿರಲಿ. ಆದರೆ, ಅವರ ಕುಟುಂಬವನ್ನು ನಾನು 420 ಎಂದು ಕರೆಯುವುದಿಲ್ಲ. ದೇಶದ ಮಾಜಿ ಪ್ರಧಾನಿ ಕುಟುಂಬವನ್ನು ಆ ರೀತಿ ಕರೆಯುವುದಿಲ್ಲ ಎಂದು ನುಡಿದರು.
ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ. ಅವರ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡವರೇ ಪೆನ್‍ಡ್ರೈವ್ ಬಹಿರಂಗ ಮಾಡಿದ್ದಾರೆ. ಅದನ್ನು ಹೇಳುವುದಕ್ಕೆ ಅವರಿಗೆ ಆಗುತ್ತಿಲ್ಲ. ಅದಕ್ಕಾಗಿ ಕುಮಾರಸ್ವಾಮಿ ವಿಷಯವನ್ನು ಮರೆಮಾಚುತ್ತಿದ್ದಾರೆ. ದೇವೇಗೌಡರು ಎಲ್ಲ ವಿಚಾರಕ್ಕೆ ಅರ್ಜಿ ಬರೆಯುತ್ತಾರೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಏಕೆ ಬರೆಯಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಏಕೆ ತರ್ತೀರಿ ಅಂದರೆ, ನೇಹಾ ಕೊಲೆ ಪ್ರಕರಣದಲ್ಲಿ ಬಿಜೆಪಿ-ಜೆಡಿಎಸ್, ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದು ಏಕೆ ಎಂದು ನಾವು ಪ್ರಶ್ನಿಸಬಹುದಲ್ಲ?. ಆ ಕೊಲೆಗೂ, ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ?. ಪ್ರಧಾನಿ ಮೋದಿ ಎನ್‍ಡಿಎ ಮುಖ್ಯಸ್ಥರು. ಅವರು ಜೆಡಿಎಸ್ ಪಕ್ಷದ ಪರವಾಗಿಯೂ ಪ್ರಚಾರ ಮಾಡಿದ್ದಾರೆಂದು ಸುರೇಶ್ ತಿರುಗೇಟು ನೀಡಿದರು.