ಡಿ.ಕೆ.ಶಿವಕುಮಾರ್ ಕದ್ದುಮುಚ್ಚಿ ಯಾರನ್ನೂ ಭೇಟಿ ಮಾಡಿಲ್ಲ : ಡಿ.ಕೆ.ಸುರೇಶ್

ಬೆಂಗಳೂರು : ‘ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಪ್ರಧಾನಿ ಕದ್ದುಮುಚ್ಚಿ ಯಾರನ್ನು ಭೇಟಿ ಮಾಡಿಲ್ಲ. ಸಾರ್ವಜನಿಕವಾಗಿ ತಿಳಿಸಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈಶಾ ಪೌಂಡೆಷನ್‍ನ ಸದ್ಗುರು, ಶಿವಕುಮಾರ್ ಮನೆಗೆ ಬಂದು ಆಹ್ವಾನ ನೀಡಿದ್ದರು. ಆಹ್ವಾನ ಸ್ವೀಕರಿಸಿ ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಶಿವಕುಮಾರ್ ಮೊದಲಿನಿಂದಲೂ ದೇವರ ಮೇಲೆ ಭಕ್ತಿ ಹೊಂದಿದ್ದವರು. ಶಿವಕುಮಾರ್ ಎಂದು ಹೆಸರು ಬಂದಿದ್ದೆ ಶಿವನ ಹರಕೆಯಿಂದ ಅವರು ಜನಿಸಿದ ಕಾರಣ ನಮ್ಮ ತಂದೆ-ತಾಯಿ ಅವರಿಗೆ ಶಿವಕುಮಾರ್ ಎಂದು ಹೆಸರಿಟ್ಟರು ಎಂದು ಸ್ಮರಿಸಿದರು.
ಶಿವಕುಮಾರ್ ಅವರು ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ ವರ್ಷಕ್ಕೆ ಎರಡು-ಮೂರು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಾರೆ. ಇದರ ಜತೆಗೆ ಶೃಂಗೇರಿ ಮಠ, ಕೇರಳ, ತಮಿಳುನಾಡು, ಉತ್ತರ ಭಾರತದ ದೇವಾಲಯಕ್ಕೆ ಹೋಗುತ್ತಾರೆ. ಇದರಲ್ಲಿ ವಿಶೇಷ ಅರ್ಥವಿಲ್ಲ. ಒಬ್ಬ ಹಿಂದೂವಾಗಿ ತನ್ನ ಸಂಸ್ಕೃತಿ, ಸಂಸ್ಕಾರ ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
ನಾವು ಎಲ್ಲ ಜಾತಿ, ಧರ್ಮಗಳನ್ನು ಗೌರವಿಸುತ್ತೇವೆ. ಶಿವಕುಮಾರ್ ಅವರು ತಮ್ಮ ಗುರುಗಳಿಂದ ದೀಕ್ಷೆ ಪಡೆದಿದ್ದು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ ಎಂದು. ಈ ದೀಕ್ಷೆ ಅಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರದ್ದು ತಮ್ಮದೇ ಆದ ಆಚರಣೆ ಇರುತ್ತದೆ ಎಂದು ಅವರು ಹೇಳಿದರು.
ವಿಶೇಷ ಅರ್ಥ ಬೇಡ: ಶಿವಕುಮಾರ್ ಹೊಸದಿಲ್ಲಿಯಲ್ಲಿ ತಮ್ಮ ಹಕ್ಕು ಮಂಡನೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಶಿವಕುಮಾರ್ ದಿಲ್ಲಿಗೆ ಹೋಗಿದ್ದಾರೆಂದರೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಪಕ್ಷದ ಅಧ್ಯಕ್ಷರು. ಪ್ರತಿ ತಿಂಗಳು, ಹದಿನೈದು ದಿನಕ್ಕೊಮ್ಮೆ ದಿಲ್ಲಿಗೆ ಹೋಗುತ್ತಾರೆ. ಅಧ್ಯಕ್ಷ ಸ್ಥಾನ ಇದ್ದಾಗ, ಇಲ್ಲದಿದ್ದಾಗಲೂ ಅವರು ಹೈಕಮಾಂಡ್ ನಾಯಕರ ಜತೆ ನಿರಂತರ ಒಡನಾಟ ಇಟ್ಟುಕೊಂಡಿರುತ್ತಾರೆ ಎಂದರು.
‘ಕಾಂಗ್ರೆಸ್‍ನಲ್ಲಿ ಅಜಿತ್ ಪವಾರ್, ಏಕನಾಥ ಶಿಂಧೆ ಹುಟ್ಟುಕೊಂಡಿದ್ದಾರೆ’ ಎಂಬ ಬಿಜೆಪಿ ನಾಯಕರ ಮಾತಿಗೆ ನಾನು ಉತ್ತರಿಸುವ ಅಗತ್ಯವಿಲ್ಲ. ಮೊದಲು ಬಿಜೆಪಿಯವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಅನಗತ್ಯವಾಗಿ ಕಾಂಗ್ರೆಸ್, ಶಿವಕುಮಾರ್ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದೇಕೆ?’ ಎಂದು ಅವರು ಪ್ರಶ್ನಿಸಿದರು.
ಪಕ್ಷವನ್ನು ನಂಬಿದ್ದಾರೆ: ‘ಸಿಎಂ ಹುದ್ದೆಯ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಶಿವಕುಮಾರ್ ಪಕ್ಷವನ್ನು ನಂಬಿದ್ದಾರೆ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಇದೀಗ ಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಆ ಕಾಲ ಬರುತ್ತದೆಯೋ ಇಲ್ಲವೋ ನನಗೇನು ಗೊತ್ತು, ನಾನು ಹೇಗೆ ಹೇಳಲು ಸಾಧ್ಯ’
-ಡಿ.ಕೆ.ಸುರೇಶ್ ಮಾಜಿ ಸಂಸದ