ಬಿಬಿಎಂಪಿಯ ಸಂಚಾರಿ ಪ್ರಯೋಗಾಲಯ ವಾಹನಗಳಿಗೆ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್

ಬೆಂಗಳೂರು : ಬಿಬಿಎಂಪಿ ವತಿಯಿಂದ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಎರಡು ಸಂಚಾರಿ ಪ್ರಯೋಗಾಲಯ ವಾಹನಗಳನ್ನು ಖರೀದಿಸಿದ್ದು, ಗುರುವಾರದಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಹನಗಳಿಗೆ ಚಾಲನೆ ನೀಡಿದರು.
ಬಿಬಿಎಂಪಿಯ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಮಾಡಲು ಹೆಚ್ಚು ಅನುಕೂಲಕರವಾಗಿರುವ ನಿಟ್ಟಿನಲ್ಲಿ 2 ಸಂಚಾರಿ ಪ್ರಯೋಗಾಲಯ ವಾಹನಗಳು ಕಾರ್ಯನಿರ್ವಹಿಸಲಿವೆ. 2 ವಾಹನಗಳಿಗಾಗಿ 38.50 ಲಕ್ಷ ರೂ. ವ್ಯಯಿಸಿದ್ದು, ಗುಣಮಟ್ಟ ಪರೀಕ್ಷಿಸುವ ಉಪಕರಣಗಳಿಗೆ 11.40 ಲಕ್ಷ ರೂ. ಸೇರಿದಂತೆ 49.90 ಲಕ್ಷ ರೂ. ವ್ಯಯಿಸಲಾಗಿದೆ.
ಒಂದು ಸಂಚಾರಿ ವಾಹನದಲ್ಲಿ ಚಾಲಕ, ಲ್ಯಾಬ್ ಟೆಕ್ನಿಷಿಯನ್, ಲ್ಯಾಬ್ ಸಹಾಯಕ ಸೇರಿ ಮೂರು ಮಂದಿ ಕಾರ್ಯನಿರ್ವಹಿಸಲಿದ್ದು, ಈ 2 ವಾಹನಗಳು ಗುಣ ನಿಯಂತ್ರಣ ವಿಭಾಗದಡಿ ಕಾರ್ಯನಿರ್ವಹಿಸಲಿವೆ. ಪಾಲಿಕೆಯ ಎಂಟೂ ವಲಯಗಳಲ್ಲಿ ಕಾಮಗಾರಿ ಗುಣಮಟ್ಟ ಪರಿಶೀಲಿಸಲು ಬಳಸಿಕೊಳ್ಳಲಾಗುತ್ತದೆ.
ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳಿಗಾಗಿ ಉಪಯೋಗಿಸುವ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಲಾಗುವುದು. ಸಂಚಾರಿ ವಾಹನದಲ್ಲಿ ಬಿಟುಮಿನ್ ಮಾದರಿ, ಕಾಬುಲ್ ಸ್ಟೋನ್, ಕಬ್ಬಿಣ, ಅಗ್ರಿಗೇಟ್ಸ್, ಕಾಂಕ್ರೀಟ್ ಮಾದರಿ, ತಾಪಮಾನ ಪರಿಶೀಲಿಸುವ ಉಪಕರಣ, ಕೋರ್ ಕಟ್ಟಿಂಗ್ ಯಂತ್ರ, ತೂಕ ಮಾಡುವ ಯಂತ್ರ ಸೇರಿದಂತೆ 16 ಉಪಕರಣಗಳು ಇರಲಿವೆ.