ನನ್ನ ಕ್ಷೇತ್ರದಲ್ಲಿಯೇ ಮೈಕ್ರೋ ಫೈನಾನ್ಸ್ ಕಿರುಕುಳ ಜೀವಂತವಿದೆ : ಡಾ.ಜಿ.ಪರಮೇಶ್ವರ್

ಬೆಂಗಳೂರು : ನಾನು ಪ್ರತಿನಿಧಿಸುವ ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿಯೇ ಮೈಕ್ರೋ ಫೈನಾನ್ಸ್ ಕಿರುಕುಳ ಬೆಳಕಿಗೆ ಬಂದಿದ್ದು, ಈ ಸಂಬಂಧ ಕ್ರಮ ಜರುಗಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರಟಗೆರೆ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರು ಮೈಕ್ರೋ ಫೈನಾನ್ಸ್ ಮೂಲಕ 2.50 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ. ಅದಕ್ಕೆ 4.50 ಲಕ್ಷ ರೂ. ಚಕ್ರಬಡ್ಡಿ ರೂಪದಲ್ಲಿ ವಾಪಸ್ ಪಾವತಿಸಿದ್ದಾರೆ. ಆದರೂ ಹೆಚ್ಚುವರಿ 80 ಸಾವಿರ ರೂ. ಪಾವತಿಸಬೇಕೆಂದು ಮನೆಗಳಿಗೆ ಬೀಗ ಜಡಿದು, ನೋಟಿಸ್ ಅಂಟಿಸಿದ್ದಾರೆ. ಇದಾದ ಬಳಿಕ ಕುಟುಂಬಸ್ಥರು ಊರು ಬಿಟ್ಟು ಹೋಗಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಮನೆ ಬಿಟ್ಟು ಹೋಗಿದ್ದವರನ್ನು ಮತ್ತೆ ವಾಪಸ್ ಕರೆತರಲಾಗಿದೆ ಎಂದು ವಿವರಿಸಿದರು.
ಮೈಕ್ರೋ ಫೈನಾನ್ಸ್ ವ್ಯಹವಾರ ಬೇರೆ ವಿಚಾರ. ಆದರೆ, ರಾಜ್ಯದಲ್ಲಿ 59 ಸಾವಿರ ಕೋಟಿ ರೂ. ಸಾಲ ಕೊಟ್ಟಿರುವುದು ಇದೆ. ಅದರ ಬಗ್ಗೆ ಹೆಚ್ಚು ಒತ್ತು ನೀಡಲು ಹೋಗಿಲ್ಲ. ಕೂಡಲೇ ಕಾನೂನು ತಂದು ದೌರ್ಜನ್ಯ ತಡೆಯಬೇಕಿದೆ. ಎಂಎಫ್‍ಐಗಳು ಕೋರ್ಟ್‍ಗೆ ಹೋಗುತ್ತಾರೆ ಎಂಬುದು ಗಮನಕ್ಕೆ ಇದೆ. ಅವರು ಕೋರ್ಟ್‍ಗೆ ಹೋಗದಿರುವಂತಹ ಕಾನೂನು ಮಾಡಬೇಕಲ್ಲವೆ. ಇದನ್ನು ಕೂಡ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.
ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನದ ಕುರಿತು ಪ್ರತಿಕ್ರಿಯಿಸಿ, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರನ್ನು ನಾಮನಿರ್ದೇಶನ ಮಾಡುವಾಗ ನಮ್ಮ ಪಕ್ಷದಲ್ಲಿ ಕೆಲವು ಪದ್ಧತಿಗಳಿವೆ. ಎಲ್ಲರ ಪರವಾಗಿ ಮುಖ್ಯಮಂತ್ರಿಗಳು ಮತ್ತು ಅಧ್ಯಕ್ಷರು ಮಾಡುತ್ತಾರೆ ಎಂದರು.
ವಿವಿಧ ನಿಗಮ ಮಂಡಳಿಗೆ ಸದಸ್ಯರ ಆಯ್ಕೆಯನ್ನು ಅಂತಿಮಗೊಳಿಸಿ, ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ನೀಡಿದ್ದೇನೆ. ಕಾರ್ಯಕರ್ತರದ್ದು ಅಧ್ಯಕ್ಷರು ಮಾಡಬೇಕಿದೆ ಎಂದ ಅವರು, ಸಚಿವರಾದ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಯಾವುದೇ ರೀತಿಯ ಸಭೆ ಮಾಡಿಲ್ಲ ಎಂದು ಸ್ಪಷ್ಟಪಡಸಿದರು.