ದಿಲ್ಲಿ ಫಲಿತಾಂಶ ಬೇರೆ ರಾಜ್ಯ ಚುನಾವಣೆಗಳ ಮೇಲೆ ಪ್ರಭಾವ ಬೀರಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು : ಹೊಸದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಸೋಲಿನ ಬಗ್ಗೆ ಎಐಸಿಸಿ ಮತ್ತು ಕೆಪಿಸಿಸಿ ವಿಶ್ಲೇಷಣೆ ಮಾಡಲಿವೆ. ಹೊಸದಿಲ್ಲಿ ಚುನಾವಣಾ ಫಲಿತಾಂಶ ಬೇರೆ ರಾಜ್ಯ ಚುನಾವಣೆಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಕಾಂಗ್ರೆಸ್ ಮತ್ತು ಆಪ್ ನಡುವೆ ಮೈತ್ರಿ ಹೋರಾಟ ನಡೆಸಿದ್ದರೆ ಬಿಜೆಪಿ ಗೆಲುವು ಸಾಧ್ಯವಾಗುತ್ತಿರಲಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಕಾಲದಲ್ಲೂ ಮೈತ್ರಿ ಒಂದೇ ರೀತಿ ಇರುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ವಿಷಯಗಳು ಚರ್ಚೆಗೆ ಬಂದು ಮೈತ್ರಿ ಏರ್ಪಡುತ್ತದೆ, ವಿಧಾನಸಭಾ ಚುನಾವಣೆ ಸ್ಥಳೀಯ ವಿಷಯಗಳ ಮೇಲೆ ಆಗುತ್ತದೆ. ಪ್ರತಿ ಚುನಾವಣೆ ವಿಭಿನ್ನವಾಗಿ ಇರುತ್ತದೆ ಎಂದರು.
ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ಸಂಬಂಧ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಮಾಡಿರುವುದಕ್ಕೆ ಸರಕಾರ ಉತ್ತರ ಕೊಡುತ್ತದೆ. ಯಾವ ದೃಷ್ಟಿಕೋನದಲ್ಲಿ ವಾಪಸ್ ಕಳಿಸಿದ್ದಾರೆ ಗೊತ್ತಿಲ್ಲ. ಅವರು ಅಧಿವೇಶನದಲ್ಲಿ ಚರ್ಚೆ ಮಾಡಿ ತೀರ್ಮಾನಿಸಿ ಎಂದಿದ್ದಾರೆ. ಇದರ ಬಗ್ಗೆ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರಷ್ಟೇ. ಅವರು ಸಂಪೂರ್ಣ ವಾಪಸ್ ಕಳುಹಿಸಿದ್ದರೆ ನಮ್ಮ ಉತ್ತರ ಬೇರೆ ಇರುತ್ತಿತ್ತು. ವಿಧಾನಸಭೆಯಲ್ಲೂ ಮಸೂದೆ ಮಂಡಿಸಿ ಅಂಗೀಕಾರ ಆದ ನಂತರ ಮತ್ತೆ ಕಳುಹಿಸುತ್ತೇವೆ ಎಂದರು.