ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಗಾ : ಡಾ.ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವಂತ ಘಟನೆಗಳು ನಡೆಯದಂತೆ ಮುಂಗಡ ಮಾಹಿತಿಯನ್ನು ಕಲೆಹಾಕಿ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ನಿಗಾವಹಿಸಲು ಅಗತ್ಯ ಕ್ರಮಗಳನ್ನು ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವೀಲ್ಹಿಂಗ್ ಮಾಡುವಂತಹ ಮತ್ತು ಕೈಯಲ್ಲಿ ಚಾಕು, ಚೂರಿ, ಲಾಂಗ್ ಹಿಡಿದುಕೊಂಡು ಓಡಾಡುತ್ತಾ ಸಮಾಜದಲ್ಲಿ ಶಾಂತಿ ಕದಡುತಿರುವುದು ಕಂಡುಬಂದಲ್ಲಿ ಅಂತಹವರನ್ನು ದಸ್ತಗಿರಿ ಮಾಡಿ ಬಂಧಿಸಲಾಗುವುದು ಹಾಗೂ ಕಾನೂನಿನ ರೀತ್ಯ ಕ್ರಮಗಳನ್ನು ಜರುಗಿಸಲಾಗುವುದು ಎಂದರು.
ಸಮಾಜದಲ್ಲಿ ಶಾಂತಿ ಹಾಳು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆ ಸೃಷ್ಟಿಸುವವರ ವಿರುದ್ದ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡು ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡಲಾಗುತ್ತಿದೆ. ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಬೀಟ್ ವ್ಯವಸ್ಥೆ ಮಾಡಲಾಗಿದೆ. ಬೀಟ್ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಿ ಯಾವುದೇ ಅಪರಾಧ ಕೃತ್ಯಗಳು ಜರುಗದಂತೆ ನಿಗಾವಹಿಸಲಾಗುತ್ತಿದೆ. ಒಂದು ವೇಳೆ ಪೆÇಲೀಸ್ ಅಧಿಕಾರಿ/ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷತೆಯಿಂದಾಗಿ ಅಪರಾಧ ಕೃತ್ಯಗಳು ಜರುಗಲು ಕಾರಣವಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಪದೇಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ರೌಡಿಗಳ ಬಗ್ಗೆ ನಿಗಾವಹಿಸಿ ಅವರುಗಳ ವಿರುದ್ಧ ಸುಮೊಟೋ ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸುಸಜ್ಜಿತವಾದ ಗಸ್ತು ಕರ್ತವ್ಯವನ್ನು ನಿರ್ವಹಿಸಲು ನಗರದಲ್ಲಿ ಹೊಯ್ಸಳ ವಾಹನವನ್ನು ಮತ್ತು ಚೀತಾ ವಾಹನಗಳನ್ನು ನಿಯೋಜಿಸಲಾಗಿದೆ. ಈ ಮೂಲಕ ನಗರದ ಯಾವುದೇ ಸ್ಥಳದಿಂದ 112 ಸಂಖ್ಯೆಗೆ ಕರೆ ಮಾಡಿದಲ್ಲಿ ಕೆಲವೇ ನಿಮಿಷಗಳ ಒಳಗಾಗಿ ಆ ಸ್ಥಳವನ್ನು ತಲುಪಿ ನೊಂದ ವ್ಯಕ್ತಿಗೆ ನ್ಯಾಯ ಕೊಡಿಸುವ ಹಾಗೂ ಅಪರಾಧ ಕೃತ್ಯವನ್ನು ತಡೆಯುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ವಿವರಿಸಿದರು.
ಬೆಂಗಳೂರಿನಲ್ಲಿ 2023ರಲ್ಲಿ ವ್ಹಿಲಿಂಗ್ ಮಾಡಿದವರ ವಿರುದ್ಧ 242 ಪ್ರಕರಣಗಳನ್ನು ದಾಖಲಿಸಿ, 264 ಆರೋಪಿತರ ಪೈಕಿ 207 ಜನರನ್ನು ಬಂಧಿಸಲಾಗಿದೆ. 2024ರಲ್ಲಿ 532 ಪ್ರಕರಣ ದಾಖಲಿಸಿ 479 ಬಂಧಿಸಿದ್ದೇವೆ. 2025ರಲ್ಲಿ ಈವರೆಗೆ 114 ಪ್ರಕರಣಗಳಲ್ಲಿ 102 ಜನರನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ. ಅಲ್ಲದೆ, ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ರೌಡಿಶೀಟರ್‍ಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲಾಗಿದೆ. 2022ರಲ್ಲಿ 44, 2023ರಲ್ಲಿ 53 ಪ್ರಕರಣ, 2024ರಲ್ಲಿ 34, 2025ರಲ್ಲಿ 8 ಪ್ರಕರಣ ದಾಖಲಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಈ ಸಂಬಂಧ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯನ್ನು ಪ್ರತ್ಯೇಕವಾಗಿ ಸೃಜಿಸಲಾಗಿದೆ. ಡಿ.ಜಿ. ಅವರ ಕೆಳಗೆ ಎ.ಡಿ.ಜಿ.ಪಿ, ಐ.ಜಿ.ಪಿ ಹಾಗೂ 7 ಜನ ಎಸ್.ಪಿಗಳು ಸೇರಿದಂತೆ, ಇತರೆ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ. ಸೈಬರ್ ಅಪರಾಧಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ರಾಜ್ಯಾದ್ಯಂತ 2024ರಲ್ಲಿ 266 ವ್ಹಿಲಿಂಗ್ ಪ್ರಕರಣಗಳನ್ನು ದಾಖಲಿಸಿ 179 ಜನರನ್ನು ಬಂಧಿಸಲಾಗಿದೆ. 2025ರಲ್ಲಿ ಈವರೆಗೆ 47 ಪ್ರಕರಣಗಳಲ್ಲಿ 30 ಜನರನ್ನು ಬಂಧಿಸಲಾಗಿದೆ. ಮಾರಕಸ್ತ್ರಗಳನ್ನು ಹಿಡಿದು ಪುಂಡಾಟಿಕೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, 2023ರಲ್ಲಿ 68 ಪ್ರಕರಣ ದಾಖಲಿಸಿ, 147 ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 66 ಪ್ರಕರಣಗಳಲ್ಲಿ 187 ಆರೋಪಿಗಳು, 2025ರ ಫೆಬ್ರವರಿವರೆಗೆ 26 ಪ್ರಕರಣ ದಾಖಲಿಸಿ 86 ಕಿಡಿಗೇಡಿಗಳನ್ನು ಬಂಧಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ವಿವರಿಸಿದರು.
ರಾಜ್ಯದಲ್ಲಿ ಕೊಲೆ ಪ್ರಕರಣಗಳು ತಗ್ಗಿವೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷದ ಮುಖಂಡರು ಆರೋಪಿಸುತ್ತಿದ್ದಾರೆ. ಆ ರೀತಿಯ ಸಮಸ್ಯೆ ಉದ್ಭವಿಸಿಲ್ಲ. ರಾಜ್ಯಾದ್ಯಂತ 2020ರಲ್ಲಿ 1315 ಕೊಲೆ ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ 1340, 2022ರಲ್ಲಿ 1346, 2023ರಲ್ಲಿ 1294, 2024ರಲ್ಲಿ 1208 ಪ್ರಕರಣಗಳು, 2025 ಜನವರಿಯಿಂದ ಈವರೆಗೆ 100 ಪ್ರಕರಣಗಳು ವರದಿಯಗಿವೆ. ಕೊಲೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ. ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ವಿವರಿಸಿದರು.