‘ಗೌರಿ ಹಂತಕರಿಗೆ ಸನ್ಮಾನ’ ಕೇಸು ದಾಖಲಿಸಿ : ಗೃಹ ಸಚಿವ ಡಾ.ಪರಮೇಶ್ವರ್‌ಗೆ ಒತ್ತಾಯ
ಅ.22ಕ್ಕೆ ಧರಣಿ ಸತ್ಯಾಗ್ರಹ
ಬೆಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಬೇಕು’ ಎಂದು ಆಗ್ರಹಿಸಿ ಅ.22ಕ್ಕೆ ರಾಜ್ಯವ್ಯಾಪಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ‘ಗೌರಿ ಬಳಗ’ ತಿಳಿಸಿದೆ.
ಶನಿವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ‘ಗೌರಿ ಬಳಗ’ದ ಕವಿತಾ ಲಂಕೇಶ್, ಇಂದಿರಾ ಲಂಕೇಶ್, ತೀಸ್ತಾ ಸೆಟಲ್ವಾದ್, ಗಣೇಶ್ ದೇವಿ, ವಿ.ಎಸ್.ಶ್ರೀಧರ್, ಚುಕ್ಕಿ ನಂಜುಂಡಸ್ವಾಮಿ, ದೀಪು, ನೂರ್ ಶ್ರೀಧರ್, ರಾಜಲಕ್ಷ್ಮಿ ಅಂಕಲಗಿ, ಪ್ರೊ.ನಗರಗೆರೆ ರಮೇಶ್, ರಘುನಂದನ, ಶ್ರೀಪಾದ ಭಟ್, ಕೆ.ಎಲ್.ಅಶೋಕ್, ಕಲ್ಕುಳಿ ವಿಠಲ್ ಹೆಗ್ಗಡೆ, ವಾಸು ಎಚ್.ವಿ., ಆದಿತ್ಯ ಭಾರದ್ವಜ್, ಇರ್ಷದ್ ಅಹ್ಮದ್, ಶ್ರೀನಾಥ್ ಪೂಜಾರ್, ಕಲೀಮುಲ್ಲ, ಶಶಾಂಕ್ ಪತ್ರವನ್ನು ಬರೆದಿದ್ದಾರೆ.
‘ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು. ಗೌರಿ ಲಂಕೇಶ್ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.
ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವುದನ್ನು ಗುಜರಾತ್, ಉತ್ತರ ಪ್ರದೇಶಗಳಲ್ಲಿ ಕಂಡಿದ್ದೆವು. ಎಂತಹ ಸ್ಥಿತಿಗೆ ಈ ರಾಜ್ಯಗಳು ತಲುಪಿದವಲ್ಲಾ ಎಂದು ಮರುಗಿದ್ದೆವು, ಈ ರೀತಿಯಲ್ಲಿ ಅಪರಾಧಿಗಳನ್ನು ಸನ್ಮಾನಿಸಿ ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡುವುದನ್ನು ನಾವು ಪ್ರತಿಭಟಿಸಿದ್ದೆವು. ಆದರೆ ನಮ್ಮದೇ ರಾಜ್ಯದಲ್ಲಿ, ಕರ್ನಾಟಕದ ಹೆಮ್ಮೆಯ ದನಿ ಗೌರಿ ಲಂಕೇಶ್‍ರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನಿಸಿರುವುದ ಕಂಡು ನಾವು ದಂಗಾಗಿದ್ದೇವೆ ಎಂದಿದ್ದಾರೆ.
ಕರ್ನಾಟಕದ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಆದ ದೊಡ್ಡ ಕಳಂಕ ಇದಾಗಿದೆ. ಏನೂ ಆಗಿಲ್ಲವೆಂಬಂತೆ ಗೃಹ ಇಲಾಖೆ ಇರುವುದನ್ನು ಕಂಡು ಮನಸ್ಸಿಗೆ ಬಹಳ ಬೇಸರವೂ ಆಗಿದೆ. ಕೊಲೆಪಾತಕರಿಗೆ ಮಾಡಿರುವ ಸನ್ಮಾನ, ಕೊಲೆಗೆ ನೀಡಿರುವ ಪ್ರಚೋದನೆಯಾಗಿದೆ, ಹಿಂಸೆಗೆ ಒದಗಿಸಿರುವ ಸಾಮಾಜಿಕ ಮನ್ನಣೆಯಾಗಿದೆ. ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರೂ ಈ ಪ್ರಚೋದನಕಾರಿ ನಡೆ ಸರಿಯಲ್ಲ ಎಂದು ಅವರುಗಳು ಖಂಡಿಸಿದ್ದಾರೆ.