ಕೇಂದ್ರ ಸರಕಾರ ಹಿಂದಿಯೇತರ ಭಾಷೆಗಳ ಉಳಿವಿಗಾಗಿ ಭಾಷಾ ನಿರ್ದೇಶಕರನ್ನು ನೇಮಿಸಲಿ : ಡಾ.ಪುರುಷೋತ್ತಮ ಬಿಳಿಮಲೆ
ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ದೇಶಾದ್ಯಂತ ಹಿಂದಿ ಹೇರಿಕೆಯ ಪ್ರಾಬಲ್ಯ ಹೆಚ್ಚುತ್ತಿರುವ ಈ ದಿನಗಳಲ್ಲಿ ಇದನ್ನು ಸಮರ್ಥವಾಗಿ ಎದುರಿಸಲು ದಕ್ಷಿಣ ಭಾರತೀಯ ರಾಜ್ಯಗಳು ಸಂಘಟಿತರಾಗಬೇಕಿದ್ದು, ಕೇಂದ್ರ ಸರಕಾರ ಹಿಂದಿಯೇತರ ಭಾಷೆಗಳ ಉಳಿವಿಗಾಗಿ ಭಾಷಾ ನಿರ್ದೇಶಕರನ್ನು ನೇಮಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದ್ದಾರೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಸಂವಿಧಾನದ 350(ಬಿ) ಅನುಚ್ಛೇದವು ಭಾಷೆ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರಕಾರಕ್ಕೆ ಭಾಷೆ ನಿರ್ದೇಶಕರನ್ನು ನೇಮಿಸುವ ಅಧಿಕಾರವನ್ನು ನೀಡಿದ್ದು, ಹಿಂದಿಯೇತರ ರಾಜ್ಯಗಳ ಪರಸ್ಪರ ಭಿನ್ನಾಭಿಪ್ರಾಯಗಳು ಈ ಸಂಘಟಿತ ಹೋರಾಟಕ್ಕೆ ಅಡ್ಡಿಯಾಗಿರುವ ಕಾರಣ ಅಭಿಪ್ರಾಯ ಭೇದವನ್ನು ತೊಡೆದು ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಒಗ್ಗೂಡಿ ಭಾಷಾ ನಿರ್ದೇಶಕರ ನೇಮಕಕ್ಕೆ ಕೇಂದ್ರ ಸರಕಾರವನ್ನು ಆಗ್ರಹಿಸಬೇಕಿದೆ ಎಂದಿದ್ದಾರೆ.
ಸಾಂವಿಧಾನಿಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ದಕ್ಷಿಣ ಭಾರತೀಯ ರಾಜ್ಯಗಳು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದ್ದು, ಕರ್ನಾಟಕದಿಂದಲೇ ಈ ಹೋರಾಟ ಆರಂಭವಾಗಬೇಕಿದೆ. ಕರ್ನಾಟಕ ರಾಜ್ಯ ಈ ಕುರಿತಂತೆ ಮೊದಲ ಹೆಜ್ಜೆಯನ್ನು ಇಡುವುದು ಸಕಾಲಿಕ ನಿಲುವಾಗಲಿದೆ. ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಭಾಷಾ ನಿರ್ದೇಶನಾಲಯವನ್ನು ಸ್ಥಾಪಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿದ್ದಾರೆ.