ರಾಜ್ಯ ಬಿಜೆಪಿ ನಾಯಕರ ವ್ಯಕ್ತಿತ್ವ ಅನಾವರಣಗೊಳಿಸಿದ ಡಿವಿಎಸ್: ರಮೇಶ್ ಬಾಬು

ರಮೇಶ್ ಬಾಬು
ಬೆಂಗಳೂರು : ಬಿಜೆಪಿ ಗುಂಪುಗಾರಿಕೆಯಿಂದ ಬಸವಳಿದಿದ್ದು, ಮಾಜಿ ಸಿಎಂ ಸದಾನಂದಗೌಡ ರಾಜ್ಯ ಬಿಜೆಪಿಯನ್ನು ಒಣಗಿದ ಮರಕ್ಕೆ, ಭಿನ್ನಮತೀಯರನ್ನು ಕಾಗೆಗಳಿಗೆ ಹೋಲಿಕೆ ಮಾಡಿ, ಅಪಶಕುನದ ಕಾಗೆಗಳನ್ನು ಗುಂಡಿಟ್ಟು ಓಡಿಸಬೇಕೆಂದು ಪತ್ರಿಕಾ ಸಂದರ್ಶನದಲ್ಲಿ ಹೇಳುವುದರ ಮೂಲಕ ಭೌದ್ದಿಕವಾಗಿ ದಿವಾಳಿಯಾಗಿರುವ, ಗುಂಪುಗಾರಿಕೆಯಿಂದ ತತ್ತರಿಸಿ ಸ್ವಜನ ಪಕ್ಷಪಾತದಿಂದ ತುಳುಕಿರುವ ರಾಜ್ಯ ಬಿಜೆಪಿ ನಾಯಕರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ ಎಂದು ಕೆಪಿಸಿಸಿ ಸಂವಹನ ಹಾಗೂ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೂ ಸಂಪ್ರದಾಯದಲ್ಲಿ ಕಾಗೆಯನ್ನು ವಿವಿಧ ಆಯಾಮಗಳಲ್ಲಿ ನೋಡಲಾಗುತ್ತದೆ. ಸದಾನಂದ ಗೌಡರು ಕಾಗೆಯನ್ನು ಅಪಶಕುನವೆಂದು ಭಾವಿಸಿ, ರಾಜ್ಯ ಬಿಜೆಪಿಯ ಭಿನ್ನಮತೀಯರನ್ನು ಅಪಶಕುನದ ಕಾಗೆಗಳೆಂದು ಚಿತ್ರಿಸಿರುವುದು ಅವರ ಪಕ್ಷದ ವ್ಯವಸ್ಥೆಗೆ ಮಸಿ ಬಳಿದುಕೊಂಡಂತೆ ಆಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಒಬ್ಬರ ಮೇಲೆ ಒಬ್ಬರು ಕೆಸರು ಎರಚಿಕೊಳ್ಳುವ ಮತ್ತು ತಾವೇ ಬೆತ್ತಲಾಗುವ ಪರಿಸ್ಥಿತಿಯಿಂದ ಪಕ್ಷದೊಳಗೆ ಭೀಕರ ಕ್ಷಾಮ ಉಂಟಾಗಿದೆ. ರಾಜ್ಯ ಬಿಜೆಪಿಯಲ್ಲಿ ಜಗನ್ನಾಥ ಭವನ ಮತ್ತು ಬಾಲಭವನ ಎಂಬ ಎರಡು ಗುಂಪುಗಳು ಉಂಟಾಗಿದ್ದು, ಒಬ್ಬರನ್ನೊಬ್ಬರು ಕಾಲು ಎಳೆದುಕೊಳ್ಳುತ್ತಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಮನೆಗೆ ಕಾಗೆ ನುಗ್ಗಿದರೆ ಮನೆಯನ್ನು ಶುದ್ದಿ ಮಾಡಿಕೊಳ್ಳುವ ವಾಡಿಕೆ ನಮ್ಮಲ್ಲಿದೆ. ಆದರೆ ಬಿಜೆಪಿಯನ್ನು ಮರಕ್ಕೆ ಹೋಲಿಕೆ ಮಾಡಿಕೊಂಡು ಕಾಗೆಗಳು ಮರದಲ್ಲಿ ವಾಸ ಮಾಡುತ್ತಿವೆ ಎಂಬ ಸದಾನಂದ ಗೌಡರ ಹೇಳಿಕೆ ಆ ಪಕ್ಷದ ಶುದ್ದೀಕರಣದ ಅವಶ್ಯಕತೆಯನ್ನು ಎತ್ತಿ ಹಿಡಿದಿದೆ. ಅಧಿಕಾರದ ಆಸೆಗಾಗಿ ಕರ್ನಾಟಕದಲ್ಲಿ ಆಪರೇಷನ್ ಕಮಲ ಮುಖಾಂತರ ರಾಜಕೀಯ ವ್ಯವಸ್ಥೆಯನ್ನು ಕಲುಷಿತ ಮಾಡಿದ ಬಿಜೆಪಿ ಅದರ ಫಲವನ್ನು ಈಗ ಅನುಭವಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಜನರಿಂದ ಆಯ್ಕೆಯಾಗಿ ಎಂದೂ 113 ಸ್ಥಾನಗಳನ್ನು ಗಳಿಸದ ಬಿಜೆಪಿ, ಜನರು ವಿರೋಧ ಪಕ್ಷದ ಸ್ಥಾನವನ್ನು ನೀಡಿದರೂ ಅದನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕಳಂಕಿತ ರಾಜ್ಯ ಅಧ್ಯಕ್ಷರನ್ನು, ವೈಫಲ್ಯದ ಮತ್ತು ಅವಕಾಶವಾದದ ವಿರೋಧ ಪಕ್ಷದ ನಾಯಕರನ್ನು ಹೊಂದಿರುವ ರಾಜ್ಯ ಬಿಜೆಪಿ, ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದ್ದು, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ರಮೇಶ್ ಬಾಬು ಆಗ್ರಹಿಸಿದ್ದಾರೆ.
ಕಾಗೆಗಳ ಪ್ರವೇಶದಿಂದ ರಾಜ್ಯ ಬಿಜೆಪಿ ಮನೆ ಶುದ್ಧವಾಗಬೇಕಾದರೆ ಈಗಿನ ರಾಜ್ಯಾಧ್ಯಕ್ಷರು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರೆ, ಬಿಜೆಪಿಯ ಶುದ್ದೀಕರಣಕ್ಕೆ ಅಡಿಪಾಯ ಆಗಬಹುದು. ರಾಜ್ಯ ಬಿಜೆಪಿಯಲ್ಲಿ ಯಾರು ಯಾರು ಕಾಗೆಗಳೆಂದು ಸದಾನಂದ ಗೌಡರು ಇನ್ನಷ್ಟು ಸ್ಪಷ್ಟತೆಯಿಂದ ಹೇಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರವಾಗಿ ವಿನಂತಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.