ಬೆಂಗಳೂರು | ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ : ಎಫ್ಐಆರ್ ದಾಖಲು
Photo : timesnownews.com
ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣದ ಬೆನ್ನಲ್ಲೇ ಬಸ್ಸು, ರೈಲು, ದೇವಸ್ಥಾನ, ಹೋಟೆಲ್ಗಳೂ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬೆದರಿಕೆ ಇ-ಮೇಲ್ ರವಾನಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಾ.2ರ ಶನಿವಾರದಂದು ಮಧ್ಯಾಹ್ನ 2:48ಕ್ಕೆ ಬೆದರಿಕೆ ಇ-ಮೇಲ್ ಕಳುಹಿಸಲಾಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಅಂಬಾರಿ ಉತ್ಸವ್ ಬಸ್ನಲ್ಲಿ ಸ್ಫೋಟಿಸುವ ಬೆದರಿಕೆ: ಸ್ವಿಡ್ಜರ್ಲೆಂಡ್ ಮೂಲದ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಇ-ಮೇಲ್ ಸರ್ವಿಸ್ ಬಳಸಿರುವ ಆರೋಪಿ ಬಾಂಬ್ ಬೆದರಿಕೆಯೊಡ್ಡಿದ್ದಾನೆ. ಕರ್ನಾಟಕ ಸರಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರು, ಅಡ್ಮಿನ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಡಿಸಿಪಿ ಸೇರಿದಂತೆ ವಿವಿಧ ಅಧಿಕೃತ ಖಾತೆಗಳಿಗೆ ಇ-ಮೇಲ್ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಮೇಲ್ನಲ್ಲಿ ಏನಿದೆ?: ‘ನಗರದ ಎಚ್ಎಎಲ್ನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟವು ಮೊದಲನೇ ಟ್ರೈಲರ್, ನೀವು ನಮಗೆ 2.5 ಮಿಲಿಯನ್ ಡಾಲರ್ ಹಣ ಕೊಡದಿದ್ದರೆ ಕರ್ನಾಟಕದಾದ್ಯಂತ ಬಸ್, ರೈಲು, ಟ್ಯಾಕ್ಸಿ, ದೇವಾಲಯ, ಹೋಟೆಲ್ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸ್ಫೋಟಿಸುತ್ತೇವೆ ಎಂಬುದಾಗಿ ಇ-ಮೇಲ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ.
ಎರಡನೇ ಟ್ರೈಲರ್ ತೋರಿಸಲು ನಾವು ಸಜ್ಜಾಗಿದ್ದು, ಅಂಬಾರಿ ಉತ್ಸವ್ ಬಸ್ನಲ್ಲಿ ಸ್ಫೋಟಿಸಲಾಗುವುದು. ತಮ್ಮ ಬೇಡಿಕೆಗಳು, ಮುಂದಿನ ನಡೆ ಹಾಗೂ ಸದ್ಯ ಕಳಿಸಲಾಗಿರುವ ಇ-ಮೇಲ್ ಸಂದೇಶದ ಸ್ಕ್ರೀನ್ ಶಾಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತೇವೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ನಿರತರಾಗಿರುವ ಸಿಸಿಬಿ ಹಾಗೂ ಎನ್ಐಎ ಅಧಿಕಾರಿಗಳು ಬೆದರಿಕೆ ಇ-ಮೇಲ್ ಸಂದೇಶ ಪ್ರಕರಣದ ಕುರಿತಾಗಿಯೂ ಡಿಜಿ-ಐಜಿಪಿ ಹಾಗೂ ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ಈ ಬಗ್ಗೆಯೂ ತೀವ್ರವಾಗಿ ತನಿಖೆ ಕೈಗೊಂಡಿರುವುದಾಗಿ ತಿಳಿದುಬಂದಿದೆ.