ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆಯಲ್ಲಿ ಬೆಂಕಿ ಪ್ರಕರಣ : ಮಾಲಕ, ವ್ಯವಸ್ಥಾಪಕ ಬಂಧನ
Screengrab : x/@blrcitytraffic
ಬೆಂಗಳೂರು : ರಾಜಾಜಿನಗರದ ಡಾ.ರಾಜ್ಕುಮಾರ್ ರಸ್ತೆಯ ಮೈ ಇವಿ ಸ್ಟೋರ್ ಮಳಿಗೆಯಲ್ಲಿ ಸಂಭವಿಸಿದ ಬೆಂಕಿ ಅವಘಡ ಪ್ರಕರಣ ಸಂಬಂಧ ಮಾಲಕ ಹಾಗೂ ವ್ಯವಸ್ಥಾಪಕನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ನಿವಾಸಿ, ಶೋರೂಂ ಮಾಲಕ ಪುನೀತ್ಗೌಡ ಹಾಗೂ ರಾಜಾಜಿನಗರದ ಆರನೆ ಬ್ಲಾಕ್ ನಿವಾಸಿ ವ್ಯವಸ್ಥಾಪಕ ಜಿ.ಯುವರಾಜ್(30) ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಓಕಳಿಪುರದ ನಿವಾಸಿ, ಹಣಕಾಸು ವಿಭಾಗದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾ (27) ಸಜೀವದಹನ ಆಗಿದ್ದರು. ದಿಲೀಪ್ ಸೇರಿ ಮೂವರು ಗಾಯಗೊಂಡಿದ್ದರು. ಘಟನೆಯಲ್ಲಿ 25ಕ್ಕೂ ಎಲೆಕ್ಟ್ರಿಕ್ ಬೈಕ್ಗಳು ಬೆಂಕಿಗಾಹುತಿಯಾಗಿದ್ದವು.
ಪ್ರಕರಣ ಸಂಬಂಧ ಗ್ನಿಶಾಮಕ ದಳ, ಪೊಲೀಸ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್)ದ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಎಫ್ಎಸ್ಎಲ್ ಅಧಿಕಾರಿಗಳು ಕೆಲವು ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕ ಪರಿಶೀಲನೆಗೆ ಕೊಂಡೊಯ್ದರು.
ಪ್ರಾಥಮಿಕವಾಗಿ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂಬುದು ಗೊತ್ತಾಗಿದೆ. ಆದರೆ, ಯಾವ ರೀತಿ ಶಾರ್ಟ್ ಸಕ್ರ್ಯೂಟ್ ಆಗಿದೆ. ಬೈಕ್ಗಳ ಬ್ಯಾಟರಿಯಿಂದ ಘಟನೆ ಉಂಟಾಗಿದೆಯೇ? ಎನ್ನುವುದರ ಕುರಿತು ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.