ಕಾರಾಗೃಹಗಳ ಸುಧಾರಣೆಗೆ ಒತ್ತು ನೀಡದೇ ಶಿಕ್ಷೆಗಷ್ಟೆ ಒತ್ತು: ನ್ಯಾ.ನಾಗಮೋಹನ್ ದಾಸ್
ಬೆಂಗಳೂರು : ಕಾರಾಗೃಹಗಳಲ್ಲಿ ಶಿಕ್ಷೆಗೆ ಒಳಗಾದವರಿಗೆ ಅಲ್ಲಿ ನೀಡುವ ಕೆಲಸಗಳು ಜಾತಿ ಆಧಾರಿತವಾಗಿರುತ್ತವೆ. ಶಿಕ್ಷೆ ಮತ್ತು ಮನಃಪರಿವರ್ತನೆ ಮಾಡಬೇಕಾದ ಜೈಲುಗಳು ಸುಧಾರಣೆಗೆ ಒತ್ತು ನೀಡದೇ ಕೇವಲ ಶಿಕ್ಷೆಗಷ್ಟೆ ಒತ್ತು ನೀಡುತ್ತಿವೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್ ನಲ್ಲಿ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ʼ (ಪಿಯುಸಿಎಲ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯ ಪ್ರತಿಪಾದನೆ ಪತ್ರಿಕೆ ‘ನ್ಯಾಯ ಸಂಕಲ್ಪ’ ಬಿಡುಗಡೆ ಮಾಡಿ ಮಾತನಾಡಿದ ಅವರು, ಜೈಲುಗಳಲ್ಲಿ ಕೆಳಜಾತಿಯವರಿಗೆ ಕಸಗುಡಿಸುವ, ಚರಂಡಿ ತೊಳೆಯುವ ಕೆಲಸಗಳನ್ನು ನೀಡಲಾಗುತ್ತದೆ. ಸ್ವಲ್ಪ ಮೇಲಿನವರಿಗೆ ಪಾತ್ರೆ ತೊಳೆಯುವುದು, ಅಡುಗೆ ಕೆಲಸ, ಅದಕ್ಕಿಂತಲೂ ಮೇಲಿನವರಿಗೆ ಅಕೌಂಟೆಂಟ್ ಮತ್ತಿತರ ಬರವಣಿಗೆ ಕೆಲಸ ನೀಡಲಾಗುತ್ತದೆ. ಪ್ರಭಾವಿ ಕೈದಿಗಳಿಗೆ ಊಟ, ಮದ್ಯ ಸಹಿತ ಎಲ್ಲವೂ ಹೊರಗಿನಿಂದ ಬರುತ್ತಿದೆ. ಇಂತಹ ವ್ಯವಸ್ಥೆ ಬದಲಾಗಬೇಕಿದೆ. ‘ನ್ಯಾಯ ಸಂಕಲ್ಪ’ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.
ಹಿಂದೆ ಕೈ ಕಡಿದವನ ಕೈಯನ್ನು ಕಡಿಯಲಾಗುತ್ತಿತ್ತು. ಕೊಲೆ ಮಾಡಿದವನನ್ನು ಕೊಲೆ ಮಾಡಲಾಗುತ್ತಿತ್ತು. ಅದೆಲ್ಲ, ಬದಲಾಗುತ್ತಾ ಬಂದಿದ್ದು, ಈಗ ಶಿಕ್ಷೆ ಮತ್ತು ಮನಃಪರಿವರ್ತನೆಗೆ ಒತ್ತು ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಅಪರಾಧಿಯು ಶಿಕ್ಷೆ ಅನುಭವಿಸುವುದರ ಜೊತೆಗೆ ಮುಂದೆ ಸಮಾಜದಲ್ಲಿ ಸಜ್ಜನ ವ್ಯಕ್ತಿಯಾಗಿ ಜೀವಿಸುವಂತೆ ಮಾಡಬೇಕು ಎನ್ನುವುದು ಅದರ ಉದ್ದೇಶ. ಆದರೆ, ನಮ್ಮ ಜೈಲುಗಳಲ್ಲಿ ಈ ಉದ್ದೇಶ ಈಡೇರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜೈಲಲ್ಲಿ ಇರುವವರಲ್ಲಿ ಮೂರನೇ ಒಂದರಷ್ಟು ಮಂದಿ ಮಾತ್ರ ಶಿಕ್ಷೆಗೆ ಒಳಗಾದವರು. ಉಳಿದವರು ವಿಚಾರಣಾಧೀನ ಕೈದಿಗಳು. ಅವರಿಗೂ ಕುಟುಂಬಗಳಿವೆ. ಅದರ ಬಗ್ಗೆ ಇಲ್ಲಿಯವರೆಗೆ ಈ ವ್ಯವಸ್ಥೆ ಯೋಚನೆಯೇ ಮಾಡಿಲ್ಲ. ಸದ್ಯ 1,400 ಮಹಿಳೆಯರು ಕೈದಿಗಳಾಗಿ ಜೈಲಲ್ಲಿದ್ದಾರೆ. ಆದರೆ, ಅವರ ಪುಟ್ಟ ಮಕ್ಕಳೂ ಜೈಲಲ್ಲಿದ್ದಾರೆ. ಅಂತಹ ಮಕ್ಕಳ ಸಂಖ್ಯೆ 1,700 ಆಗಿದೆ. ಶಾಲೆಯಲ್ಲಿ ಓದಬೇಕಿದ್ದ, ಹೊರಗೆ ಆಟವಾಡಬೇಕಿದ್ದ ಈ ಮಕ್ಕಳು ಏಕೆ ಶಿಕ್ಷೆ ಅನುಭವಿಸಬೇಕು ಎಂದು ನಾಗಮೋಹನ್ ದಾಸ್ ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಪಿಯುಸಿಎಲ್ ರಾಷ್ಟ್ರೀಯ ಕಾರ್ಯದರ್ಶಿ ವೈ.ಜೆ.ರಾಜೇಂದ್ರ, ನ್ಯಾಯ ಸಂಕಲ್ಪ ಸಂಪಾದಕ ನೆಲ್ಸನ್ ಪಿ.ರಾಜ್, ಸೇಂಟ್ ಜೋಸೆಫ್ ಕಾನೂನು ಕಾಲೇಜಿನ ಪ್ರಾಂಶುಪಾಲ ಪೌಲಿನ್, ನ್ಯಾಯಕ್ಕಾಗಿ ಸೆರೆವಾಸಿ ಕುಟುಂಬಸ್ಥರ ಸಂಘದ ಸಂಚಾಲಕಿ ಚಂದ್ರಶ್ರೀ, ವಕೀಲೆ ವಂದನಾ ಉಪಸ್ಥಿತರಿದ್ದರು.