ಹೋರಾಟಗಳಿಂದ ಪರಿಸ್ಥಿತಿ ಬದಲಾದರೂ ದೇವಸ್ಥಾನಗಳಿಗೆ ಎಲ್ಲರಿಗೂ ಪ್ರವೇಶವಿಲ್ಲ: ಕೆ.ಕೆ.ಶೈಲಜಾ
PC | x/shailajateacher
ಬೆಂಗಳೂರು : ಪಾಶ್ಚಾತ್ಯ ದೇಶಗಳಲ್ಲಿದ್ದ ಗುಲಾಮ ಪದ್ಧತಿಯಂತಹ ಶೋಷಣೆ ಕೇರಳದಲ್ಲಿಯೂ ಇತ್ತು. ಹೋರಾಟಗಳು ಪರಿಸ್ಥಿತಿಯನ್ನು ಬದಲಾಯಿಸಿದರೂ, ಇಂದಿಗೂ ಗುರುವಾಯೂರಿನಂಥ ದೇವಸ್ಥಾನಗಳಿಗೆ ಎಲ್ಲರಿಗೂ ಪ್ರವೇಶವಿಲ್ಲ ಎಂದು ಕೇರಳದ ಮಾಜಿ ಸಚಿವೆ ಹಾಗೂ ಶಾಸಕಿ ಕೆ.ಕೆ.ಶೈಲಜಾ(ಶೈಲಜಾ ಟೀಚರ್) ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿರುವ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದ ಡಾ.ಎನ್.ಎನ್.ಮಲ್ಟಿಮೀಡಿಯಾ ಹಾಲ್ನಲ್ಲಿ ಆಯೋಜಿಸಿದ್ದ ಡಾ.ಎಚ್.ಎಸ್.ಅನುಪಮಾ ಅನುವಾದಿಸಿರುವ ‘ಕಾಮ್ರೇಡ್ ಆಗಿ ನನ್ನ ಬದುಕು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇರಳದಲ್ಲಿ ಹೆಣ್ಣು ಮತ್ತು ಮಣ್ಣು ಎಂಬುದು ಉಳ್ಳವರ ಖಾಸಗಿ ವಸ್ತುಗಳಂತಾಗಿದ್ದರು. ಕೆಳವರ್ಗದ ಹುಡುಗಿಯರು ಮದುವೆಯ ಹಿಂದಿನ ದಿನ ಭೂಮಾಲೀಕನೊಂದಿಗೆ ಮಲಗುವುದನ್ನು ಬಡಜನರು ದೇವರ ನಿರ್ಧಾರ ಎಂದೇ ಭಾವಿಸಿದ್ದರು. ಹೋರಾಟಗಳು ಇಂತಹ ಕೆಟ್ಟ ಪರಿಸ್ಥಿತಿಯನ್ನು ಬದಲಾಯಿಸಿದವು. ಆದರೂ ಇಂದಿಗೂ ಗುರುವಾಯೂರಿನಂಥ ದೇವಸ್ಥಾನಗಳಿಗೆ ಎಲ್ಲರಿಗೂ ಪ್ರವೇಶ ಇಲ್ಲದಾಗಿದೆ ಎಂದು ಹೇಳಿದರು.
ಲೇಖಕಿ ಡಾ. ವಸುಂಧರಾ ಭೂಪತಿ ಮಾತನಾಡಿ, ‘ಕಾಮ್ರೇಡ್ ಆಗಿ ನನ್ನ ಬದುಕು’ ಕೃತಿಯು ಶೈಲಜಾ ಟೀಚರ್ ಅವರ ಬದುಕಿನ ಯಾನ ಮಾತ್ರವಲ್ಲ, ಈ ಕಾಲಘಟ್ಟ ಹಾಗೂ ತಲೆಮಾರಿನ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಚರಿತ್ರೆಯೂ ಆಗಿದೆ. ಕೃತಿಯು ಜೀವನ ಸಂಸ್ಕೃತಿಯ ಅರಿವನ್ನು ಮೂಡಿಸುತ್ತದೆ. ಅಲ್ಲದೆ ಇದೊಂದು ಬದುಕಿನ ದಾರಿದೀಪವಾಗಿದೆ ಎಂದರು.
ಬದುಕಿನ ಚರಿತ್ರೆಯನ್ನು ಮತ್ತು ಅಭಿವ್ಯಕ್ತಿಯ ಪರಂಪರೆಯನ್ನು ಆಯ್ದು ಕಟ್ಟಬೇಕಾದಂತಹ ಇಂದಿನ ಸಂದರ್ಭದಲ್ಲಿ ‘ಕಾಮ್ರೇಡ್ ಆಗಿ ನನ್ನ ಬದುಕು’ ಮಹತ್ವಪೂರ್ಣದ್ದಾಗಿದೆ. ಈ ಕೃತಿಯನ್ನು ಓದುತ್ತಾ ಹೋದಂತೆ ಆಪ್ತತೆಯ ಭಾವನೆಯು ಉಂಟಾಗುತ್ತದೆ. ಅಲ್ಲದೆ ಭಾಷೆಯು ಕೃತಿ ಕನ್ನಡದ್ದೇ ಎಂಬ ಆತ್ಮೀಯತೆಯನ್ನು ಹೊಂದಿದೆ ಎಂದು ಅವರು ಹೇಳಿದರು.
ಅನುವಾದಕಿ ಡಾ.ಎಚ್.ಎಸ್.ಅನುಪಮಾ ಮಾತನಾಡಿ, ಕಮ್ಯುನಿಸ್ಟ್, ಲೆಪ್ಟಿಸ್ಟ್ ಎಂದು ಹೇಳಿಕೊಳ್ಳುವುದು ಅಪರಾಧ ಎಂದು ಬಿಂಬಿಸುವ ಸಮಯದಲ್ಲಿ, ಈ ಕೃತಿಗೆ ಕಾಮ್ರೇಡ್ ಎಂದು ಹೆಸರಿಟ್ಟುಕೊಂಡಿರುವುದು ದಿಟ್ಟತನವನ್ನು ತೋರಿಸುತ್ತದೆ. ಕೃತಿಯ ಶೀರ್ಷಿಕೆಯಲ್ಲಿ ಮೂಲದಲ್ಲಿದ್ದಂತೆ ಕಾಮ್ರೇಡ್ ಬದಲಾಗಿ ಕನ್ನಡದ ಅನುವಾದವನ್ನು ಬಳಸಬೇಕು ಎಂದು ಆಲೋಚನೆ ಬಂದರೂ, ಸಮಂಜಸವೆನಿಸಿಲ್ಲ ಎಂದರು.
ಕೃತಿಯನ್ನು ಅನುವಾದ ಮಾಡುವಾಗ ಮೂಲ ಲೇಖಕರು ಪಕ್ಕದಲ್ಲಿಯೇ ಕುಳಿತು ಕತೆಯನ್ನು ಹೇಳುತ್ತಿದ್ದಾರೆ ಎಂಬ ಭಾವನೆ ಉಂಟಾಗಿತ್ತು. ಸಿಪಿಎಂ ಪಕ್ಷವು ಈ ಕೃತಿಯನ್ನು ಭಾರತೀಯ ಎಲ್ಲ ಭಾಷೆಗಳಿಗೂ ಭಾಷಾಂತರ ಮಾಡಬೇಕು ಎಂದು ಅವರು ತಿಳಿಸಿದರು.
ಪುರುಷರು ಬರೆಯುವ ಆತ್ಮಕತೆಯಲ್ಲಿ ಕುಟುಂಬದವರಿಗೆ ಎರಡನೆಯ ಸ್ಥಾನವನ್ನು ನೀಡಿ, ತಮ್ಮ ಸಾಧನೆಗಳನ್ನು ಹೊಗಳುತ್ತಾರೆ. ಕೆಲವರು ಕುಟುಂಬವನ್ನು ಮರೆತು ಬಿಡುತ್ತಾರೆ. ಆದರೆ ಹೆಣ್ಣು ಆತ್ಮಕತೆಯನ್ನು ಬರೆಯುವಾಗ ಕುಟುಂಬಕ್ಕೆ ಹೆಚ್ಚಿನ ಸ್ಥಾನಮಾನವನ್ನು ನೀಡುತ್ತಾರೆ. ಶೈಲಾಜ ಅವರ ಆತ್ಮಕತೆ ಇದಕ್ಕೆ ನಿದರ್ಶನವಾಗಿದ್ದು, ‘ಕಾಮ್ರೇಡ್ ಆಗಿ ನನ್ನ ಬದುಕು’ ಕೃತಿಯಲ್ಲಿ ಕುಟುಂಬಕ್ಕೆ ಹೆಚ್ಚಿನ ಸ್ಥಾನವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹೋರಾಟಗಾರ್ತಿ ವಿಮಲಾ ಕೆ.ಎಸ್., ಪ್ರಸನ್ನ ಸಾಲಿಗ್ರಾಮ, ಡಾ.ಅನಿಲ್ ಕುಮಾರ್ ಎ., ಸೇರಿದಂತೆ ಮತ್ತಿತರರು ಇದ್ದರು.