ದಿಲ್ಲಿ ರೈತ ಹೋರಾಟ ಬೆಂಬಲಿಸಿ ಉಪವಾಸ ಸತ್ಯಾಗ್ರಹ
ಬೆಂಗಳೂರು: ದಿಲ್ಲಿಯಲ್ಲಿ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ನ.26ರಿಂದ ದೇಶದ ರೈತರ ಹಿತಕ್ಕಾಗಿ ದಿಲ್ಲಿಯಲ್ಲಿ ಉಪವಾಸ ನಡೆಸುತ್ತಿರುವುದು 11ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಗಾರರ ಪರಿಸ್ಥಿತಿ ಗಂಭೀರವಾಗಿದೆ. ಕೇಂದ್ರ ಸರಕಾರ ಹೋರಾಟನಿರತ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ, ರೈತರನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ನಾಳೆ ಡಿ.7ರಂದು ಕಲಬುರಗಿಯಲ್ಲಿ ಡಿ.8ರಂದು ಮೈಸೂರು ಜಿಲ್ಲೆ, 9ರಂದು ಧಾರವಾಡ, 10ರಂದು ಹಾಸನ ಜಿಲ್ಲೆ, 11ರಂದು ಗದಗ, 12ರಂದು ಚಾಮರಾಜನಗರ, 13ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, 14ರಂದು ಬೆಳಗಾವಿ, 15ರಂದು ದಾವಣಗೆರೆ ಜಿಲ್ಲೆಗಳ ರೈತರಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು. ಡಾ.ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿಯಾಗಬೇಕು ಎಂದು ದಿಲ್ಲಿ ಗಡಿಯಲ್ಲಿ ಹೋರಾಟ ಮಾಡುತ್ತಿದ್ದ ರೈತ ಮುಖಂಡರನ್ನು ದೇಶದ್ರೋಹಿಗಳು. ಕಳ್ಳರ ರೀತಿಯಲ್ಲಿ ಮಧ್ಯರಾತ್ರಿ ಬಂಧಿಸಿ, ದೇಶದ ರೈತರಿಗೆ ಅಪಮಾನ ಮಾಡಿದ್ದಾರೆ. ಕೇಂದ್ರ ಸರಕಾರ ರೈತರ ಹಕ್ಕನ್ನ ದಮನ ಮಾಡಲು ಯತ್ನಿಸುತ್ತಿದೆ. ಸರಕಾರದ ವರ್ತನೆಯನ್ನು ಖಂಡಿಸುತ್ತೆನೆ ಎಂದು ತಿಳಿಸಿದರು.
ದಿಲ್ಲಿ ಗಡಿಗಳಲ್ಲಿ ನಡೆಸುತ್ತಿರುವ ರೈತ ಚಳುವಳಿಯ ಬಗ್ಗೆ ವರದಿ ನೀಡಲು ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನವಾಬಸಿಂಗ್ ಅಧ್ಯಕ್ಷತೆಯಲ್ಲಿ ಪರಿಣಿತರ ಒಳಗೊಂಡಂತೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿ ನ.22ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಆರಂಭಿಕ ವರದಿಯನ್ನು ನೀಡಿದೆ. ರೈತರ ಆತ್ಮಹತ್ಯೆ ಆಗುತ್ತಿರುವುದು ಸರಿಯಾದ ಮಾರುಕಟ್ಟೆ ಇಲ್ಲದೆ ಇರುವುದು. ಉತ್ಪಾದನೆ ವೆಚ್ಚಕ್ಕೆ ಬೆಂಬಲ ಬೆಲೆ ಕಡಿಮೆ ಇರುವುದು ಗಂಭೀರವಾಗಿದೆ. ಆದ್ದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಎಂಎಸ್‍ಪಿ ಖಾತ್ರಿ ಕಾನೂನು ಜಾರಿ ಮಾಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ವರದಿ ನೀಡಿದೆ. ಈ ವರದಿ ನೀಡಿದ ಎರಡು ಮೂರು ದಿನದಲ್ಲಿ ಕೇಂದ್ರ ಸರಕಾರ ರೈತ ಚಳವಳಿಯನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಸತ್ಯಾಗ್ರಹದಲ್ಲಿ ರೈತ ಮುಖಂಡರಾದ ಬಸವರಾಜ್ ಪಾಟೀಲ್, ಶಿವಕುಮಾರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ರಮೇಶ್ ಹೂಗಾರ್, ರೇವಣ್ಣ, ಮಾರ್ಬಳ್ಳಿ ನೀಲಕಂಠಪ್ಪ, ವರಕೊಡು ನಾಗೇಶ್, ಸೂರಿ, ಹೆಗ್ಗೂರು ರಂಗರಾಜು, ಶೇಖರಪ್ಪ, ಗಿರೀಶ, ಕಮಲಮ್ಮ, ಅಂಬಳೆ ಮಂಜುನಾಥ್, ಸತೀಶ್, ಪ್ರಕಾಶ್, ವಕೀಲ ಅಮರೇಶ್ ಮತ್ತಿತರರು ಹಾಜರಿದ್ದರು.
‘ಕೇಂದ್ರ ಬಜೆಟ್‍ನಲ್ಲಿ ರೈತರ ಸಾಲ ಶೇ.16ಕ್ಕೆ ಏರಿಕೆ ಮಾಡಿದ್ದೇವೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರು. ಆದರೆ ಈಗ ನಬಾರ್ಡ್ ಮೂಲಕ ಸಹಕಾರ ಸಂಘಗಳಲ್ಲಿ ರೈತರಿಗೆ ಕೊಡುತ್ತಿದ್ದ ಬಡ್ಡಿ ರಹಿತ ಸಾಲವನ್ನು ಕಡಿವಾಣ ಹಾಕಲು ಶೇ.50ರಷ್ಟು ಅನುದಾನ ಕಡಿತ ಮಾಡಿದ್ದಾರೆ. ಇದು ರೈತರಿಗೆ ಸಹಕಾರ ಸಂಘಗಳಲ್ಲಿ ನೀಡುತ್ತಿದ್ದ ಬಡ್ಡಿ ರಹಿತ ಕೃಷಿ ಸಾಲ ತಪ್ಪಿಸುವ ಹುನ್ನಾರ. ರಾಜ್ಯದ ಸಂಸದರಿಗೆ ರೈತರ ಪರ ಕಾಳಜಿ ಇದ್ದರೆ ಕೇಂದ್ರ ಸರಕಾರ ಕಡಿತ ಮಾಡಿರುವ ಶೇ.50ರಷ್ಟು ರಾಜ್ಯದ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಬೇಕು’
-ಕುರುಬೂರು ಶಾಂತಕುಮಾರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ