ಕನ್ನಡ ಚಿತ್ರರಂಗದಲ್ಲಿನ ಲೈಂಗಿಕ ಕಿರುಕುಳ ತಡೆಗೆ ರಚಿಸಿದ್ದ ʼಆಂತರಿಕ ದೂರು ಸಮಿತಿʼ ತಡೆಗೆ ʼFIREʼ ವಿರೋಧ
ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಹಿರಿಯ ನಿರ್ದೇಶಕಿ ಕವಿತಾ ಲಂಕೇಶ್ ಅವರ ಅಧ್ಯಕ್ಷತೆಯಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ ಸಂಬಂಧಿಸಿ ʼಆಂತರಿಕ ದೂರು ಸಮಿತಿʼಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರಚಿಸಿದ ಒಂದೇ ದಿನಕ್ಕೆ ತಡೆ ನೀಡಿರುವುದನ್ನು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ(FIRE) ವಿರೋಧಿಸಿದ್ದು, ಕನ್ನಡ ಚಲನ ಚಿತ್ರೋದ್ಯಮದಲ್ಲಿ ಅಧಿಕೃತ ಸರಕಾರಿ ಬೆಂಬಲಿತ ಆಂತರಿಕ ದೂರುಗಳ ಸಮಿತಿ ರಚನೆಗೆ ಒತ್ತಾಯಿಸಿದೆ.
ಡಿಸೆಂಬರ್ 2ರರಂದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ 11 ಸದಸ್ಯರ ಆಂತರಿಕ ದೂರುಗಳ ಸಮಿತಿಯನ್ನು ರಚಿಸಿತ್ತು. ಸಮಿತಿಯ ಸದಸ್ಯರ ಹೆಸರನ್ನು ರಾಜ್ಯ ಮಹಿಳಾ ಹಕ್ಕುಗಳ ಆಯೋಗಕ್ಕೂ ಕಳುಹಿಸಲಾಗಿದೆ. ಆದರೆ ಆಂತರಿಕ ದೂರುಗಳ ಸಮಿತಿ ರಚನೆ ಮಾಡಿದ ಕೆಲವೇ ಗಂಟೆಗಳಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಬರುವ ಚುನಾವಣಾ ಕಾರಣ ಉಲ್ಲೇಖಿಸಿ ಸಮಿತಿಗೆ ತಡೆ ನೀಡಿದೆ. ಈ ಬೆಳವಣಿಗೆ ಆಂತರಿಕ ದೂರುಗಳ ಸಮಿತಿ ರಚನೆಯಲ್ಲಿ ನಿರ್ಲಕ್ಷ್ಯವನ್ನು ತೋರಿರುವುದು, ಸಮಿತಿಯನ್ನು ರಚಿಸುವುದರಲ್ಲಿ ಇಷ್ಟವಿಲ್ಲದಿರುವಿಕೆಯನ್ನು ಮತ್ತು ಕಾನೂನಿನ ಕಡೆಗಣನೆಯನ್ನು ತೋರಿಸುತ್ತದೆ. ಮತ್ತು ಲೈಂಗಿಕ ದೌರ್ಜನ್ಯ ಮುಂದುವರಿಯಲು ಅನುಮತಿಸಿದಂತಾಗುತ್ತದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ಸಂಸ್ಥೆ ಹೇಳಿದೆ.
ನಾವು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿನ ಚುನಾವಣೆಯವರೆಗೆ ನಾವು ನೋಡುತ್ತೇವೆ, ಚುನಾವಣೆ ಬಳಿಕ ಸಮಿತಿ ರಚಿಸಬೇಕು, ಇಲ್ಲವಾದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ(POSH, 2013) ಅನುಸಾರವಾಗಿ ಕನ್ನಡ ಚಲನಚಿತ್ರೋದ್ಯಮಕ್ಕೆ ಆಂತರಿಕ ದೂರುಗಳ ಸಮಿತಿ(ICC) ಅನ್ನು ರಚಿಸುವಂತೆ ಕಾನೂನು ಹೋರಾಟವನ್ನು ನಡೆಸಲಿದೆ ಎಂದು ಫಿಲ್ಡ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ಸಂಸ್ಥೆ ಹೇಳಿದೆ.