ಸಚಿವ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್
ಬೆಂಗಳೂರು : ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ’ಗಳ ನಡುವೆಯೇ? ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕೂತುಹಲ ಕೆರಳಿಸಿದೆ.
ಸೋಮವಾರ ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಖುದ್ದು ಭೇಟಿ ನೀಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಆದರೆ, ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್, ‘ನಮ್ಮ ಪಕ್ಷದ ನಾಯಕರನ್ನು ನಾವು ಭೇಟಿ ಮಾಡುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ವಿವರಣೆ ನೀಡಿದರು.
‘ಒಂದು ವೇಳೆ ನಾವು ಯಡಿಯೂರಪ್ಪ ಅಥವಾ ಕುಮಾರಸ್ವಾಮಿ ಅವರನ್ನು ಗೌಪ್ಯವಾಗಿ ಭೇಟಿ ಮಾಡಿ ಸಭೆ ನಡೆಸಿದರೆ ಆಗ ವಿಶೇಷ ಅರ್ಥ ಕಲ್ಪಿಸಬಹುದು. ನಾವು ಪಕ್ಷ, ಸಂಘಟನೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಭೇಟಿಯನ್ನು ಅನುಮಾನದಿಂದ ನೋಡುವುದು ಸರಿಯಲ್ಲ’ ಎಂದು ಸುರೇಶ್ ಆಕ್ಷೇಪಿಸಿದರು.
ಕನಕಪುರ-ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ: ‘ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಹಿರಿಯ ಹಾಗೂ ಪ್ರಭಾವಿ ಸಚಿವರು. ಕನಕಪುರ ಕ್ಷೇತ್ರದ ಕೆಲವು ಅಭಿವೃದ್ಧಿ ಯೋಜನೆಗಳ ಮಂಜೂರಾತಿ ಬಗ್ಗೆ ಅವರ ಜತೆ ಚರ್ಚೆ ಮಾಡಲಾಯಿತು. ಅವರು ನಮ್ಮ ಮನವಿಗೆ ಒಪ್ಪಿದ್ದು, ಮುಖ್ಯಮಂತ್ರಿ ಅನುದಾನ ಬಿಡುಗಡೆ ಮಾಡಿದ ತಕ್ಷಣ ಮಂಜೂರಾತಿ ನೀಡುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಮನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆಯೂ ಚರ್ಚೆ ಮಾಡಲಾಗಿದ್ದು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್, ‘ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು. ಅವರು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡಿ, ಪಕ್ಷದ ಸಂಘಟನೆ ಹಾಗೂ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆ ಹಾಗೂ ಚರ್ಚೆ ಎರಡೂ ಇಲ್ಲ. ಈ ಅವಧಿ ಅಂತಿಮವಾಗುವವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಇದನ್ನು ಈ ಹಿಂದೆಯೂ ಬಹಳಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ. ಮುಡಾ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದರ ಆದೇಶದಂತೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬರುವ ತನಕ ಏಕೆ ಕಾಯುತ್ತಿಲ್ಲ?. ಈ ಪ್ರಕರಣದಲ್ಲಿ ಸಿಎಂ ಹಾಗೂ ಸರಕಾರ ದೋಷಮುಕ್ತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈಡಿ ಏಕಾಏಕಿ ಬಂಧಿಸಲು ಆಗುವುದಿಲ್ಲ: ಮುಡಾ ಪ್ರಕರಣದಲ್ಲಿ ಈಡಿ ಪ್ರವೇಶ ಮಾಡಿದ್ದು ಒಂದು ವೇಳೆ ಮುಖ್ಯಮಂತ್ರಿ ಬಂಧನವಾದರೆ ಪರ್ಯಾಯ ನಾಯಕರು ಯಾರಾಗಲಿದ್ದಾರೆ ಎಂದು ಕೇಳೀದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್, ಈಡಿ ಬಂದು ಏಕಾಏಕಿ ಬಂಧಿಸಲು ಸಾಧ್ಯವಿಲ್ಲ. ಈಡಿಗೆ ತನ್ನದೇ ಆದ ಸಾಕ್ಷ್ಯಾಧಾರಗಳು ಸಿಗಬೇಕು, ಆರೋಪ ಸಾಬೀತಾಗಬೇಕು. ಪ್ರಕರಣ ದಾಖಲಿಸಿದ ಮಾತ್ರಕ್ಕೆ ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ನಡೆದಿಲ್ಲ. ನಿವೇಶನಗಳನ್ನು ವಾಪಸ್ ನೀಡಲಾಗಿದೆ. ಇದರಲ್ಲಿ ಲಾಭದ ವಿಚಾರ ಇಲ್ಲ. ಶೂನ್ಯ ಹಣಕಾಸಿನ ವರ್ಗಾವಣೆ. ಇಲ್ಲಿ ಏನಾದರೂ ಲೋಪಗಳು ನಡೆದಿದ್ದರೆ ಅದನ್ನು ಲೋಕಾಯುಕ್ತ ತನಿಖಾ ಸಂಸ್ಥೆ ತನಿಖೆ ಮಾಡಲಿದೆ. ಈಡಿಯವರು ಹಣಕಾಸಿನ ವ್ಯವಹಾರಗಳ ಪ್ರಕರಣ ಮಾತ್ರ ತನಿಖೆ ಮಾಡಬೇಕು ಎಂದು ಸುರೇಶ್ ತಿಳಿಸಿದರು.
ಚನ್ನಪಟ್ಟಣದ ಅನುದಾನದ ಬಗ್ಗೆ ಚರ್ಚೆಗೆ ಬರಲಿ: ಸರಕಾರ ತಾನಾಗಿಯೇ ಬೀಳುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮೇಧಾವಿ, ತತ್ವಜ್ಞಾನಿಗಳು. ಅವರು ಬೆಳಗ್ಗೆ ಒಂದು, ರಾತ್ರಿ ಇನ್ನೊಂದು ಹೇಳುತ್ತಾರೆ. ಅವರನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ತಿಳಿಸಿದರು.
ನಾನು ತಂದ ಅನುದಾನಕ್ಕೆ ಕಾಂಗ್ರೆಸ್ ನವರು ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾರು ಎಷ್ಟು ಅನುದಾನ ತಂದಿದ್ದಾರೆ ಎಂದು ಚರ್ಚೆಗೆ ಬರಲಿ. ಅವರಿಗೆ ಅನುಮಾನ ಇದ್ದರೆ, ಅವರು ಎಷ್ಟು ಅನುದಾನ ತಂದಿದ್ದಾರೆ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಾವು ಎಷ್ಟು ಅನುದಾನ ತಂದಿದ್ದೇವೆ ಎಂದು ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.