ಮುಂಬರುವ ಶೈಕ್ಷಣಿಕ ಸಾಲಿನಿಂದ ಹೊರರಾಜ್ಯ ಕನ್ನಡಿಗರಿಗೂ ವಸತಿ ನಿಲಯಗಳಲ್ಲಿ ಉಚಿತ ಪ್ರವೇಶ : ಡಾ.ಪುರುಷೋತ್ತಮ ಬಿಳಿಮಲೆ
ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ದೇಶದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ವಸತಿನಿಲಯಗಳಲ್ಲಿ ಉಚಿತ ಪ್ರವೇಶ ಕಲ್ಪಿಸಲು ಸರಕಾರ ನಿರ್ಧರಿಸಿದ್ದು, ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಸಿಲ್ವರ್ ಜ್ಯೂಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ʼಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭʼದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರೆಸಲು ಬಯಸುವ ಗಡಿನಾಡು, ಹೊರನಾಡು ಕನ್ನಡಿಗರಿಗೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಯಾವುದೇ ನಿಬರ್ಂಧಗಳನ್ನು ಹೇರದೆ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಮಗೆ ಸ್ಪಷ್ಟ ಭರವಸೆಯನ್ನು ನೀಡಿದ್ದಾರೆ ಎಂದರು.
ಹೊರನಾಡು ಗಡಿನಾಡಿನ ಕನ್ನಡಿಗರ ಹಿತಕಾಯಲು ಯಾರೂ ಇಲ್ಲವೆನ್ನುವ ಅನಾಥಪ್ರಜ್ಞೆ ಸರಿಯಲ್ಲ. ಭಾಷೆಯ ಕುರಿತಂತೆ ಹೆಮ್ಮೆಯನ್ನು ಹೊಂದಿರುವ ಕನ್ನಡಿಗರು ಒಳನಾಡಿನಲ್ಲಿಯೂ ಸಂಕಷ್ಟದಲ್ಲಿದ್ದು, ಕನ್ನಡದ ಸಮಸ್ಯೆಗಳನ್ನು ಎಲ್ಲ ಕನ್ನಡಿಗರು ಸಂಘಟಿತರಾಗಿ ಪರಿಹರಿಸಿಕೊಳ್ಳಬೇಕಾದ ಸಂದರ್ಭ ಇದಾಗಿದೆ ಎಂದು ಅವರು ಕರೆ ನೀಡಿದರು.
ರಾಜ್ಯದಲ್ಲಿ ಏಳು ಸಾವಿರ ಏಕೋಪಾಧ್ಯಾಯ ಶಾಲೆಗಳು, ಐವತ್ತೈದು ಸಾವಿರ ಶಿಕ್ಷಕರ ಖಾಲಿ ಹುದ್ದೆಗಳು, ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿತವಾಗುತ್ತಿರುವ ಸರಕಾರಿ ಕನ್ನಡ ಶಾಲೆಗಳನ್ನು ಗಮನಿಸಿದಲ್ಲಿ ಕನ್ನಡದ ಮುಂದಿನ ದಿನಗಳ ಸ್ಥಿತಿ ಅಘಾತ ಉಂಟಾಗುತ್ತದೆ. ಇದು ಪ್ರವಾಹದ ವಿರುದ್ಧ ಈಜುವ ಕೆಲಸವಾಗಿದ್ದು, ಸಂಘಟಿತ ಹೋರಾಟವೇ ಪರಿಣಾಮಕಾರಿಯಾದ ಫಲಿತಾಂಶವನ್ನು ಒದಗಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಸಿ ಹಾಗೂ ಎಚ್.ಎಸ್.ಸಿ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿ ಅತಿಹೆಚ್ಚು ಅಂಕಗಳಿಸಿದ ಆಂಧ್ರ ಪ್ರದೇಶ ರಾಜ್ಯದ 52 ಹಾಗೂ ತೆಲಂಗಾಣ ರಾಜ್ಯದ 17 ವಿದ್ಯಾರ್ಥಿಗಳು ಸೇರಿ 69 ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.
ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಹೈದರಾಬಾದ್ನ ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆಯ ನಿರ್ದೇಶಕ ರಾಜಶೇಖರ ಎನ್., ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಸೇರಿದಂತೆ ಮತ್ತಿತರರು ಇದ್ದರು.