ವಿಧಾನ ಮಂಡಲ ಅಧಿವೇಶನ | ಮೊದಲ ದಿನವೇ ಫ್ರೀಡಂ ಪಾರ್ಕ್ನಲ್ಲಿ ನಾಲ್ಕೈದು ಪ್ರತಿಭಟನೆ

ಮಾದಿಗ ದಂಡೋರದ ವತಿಯಿಂದ ಒಳಮೀಸಲಾತಿ ಜಾರಿ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು : ವಿಧಾನ ಮಂಡಲದ ಅಧಿವೇಶನದ ಮೊದಲ ದಿನವಾದ ಸೋಮವಾರದಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಜೆಡಿಎಸ್ ವತಿಯಿಂದ ಗೃಹಲಕ್ಷ್ಮಿ ಹಣ ಬಿಡುಗಡೆ, ದಲಿತ ಸಂಘಟನೆಗಳ ಒಕ್ಕೂಟದಿಂದ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನದ ದುರ್ಬಳಕೆ, ಮಾದಿಗ ದಂಡೋರದ ವತಿಯಿಂದ ಒಳಮೀಸಲಾತಿ ಜಾರಿ ಸೇರಿದಂತೆ ಹಲವು ಧರಣಿ ಸತ್ಯಾಗ್ರಹ, ಪ್ರತಿಭಟನೆಗಳು ನಡೆದವು.
ಈ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬುತ್ತಿದೆ. ಅಭಿವೃದ್ಧಿ ಏನೆಂಬುದೇ ಗೊತ್ತಿಲ್ಲ. ಇಂಥ ಕೆಟ್ಟ ಸರಕಾರವನ್ನು ಇಲ್ಲಿಯ ತನಕ ಯಾರೂ ನೋಡಿಲ್ಲ. ಮುಂದೆಯೂ ನೋಡಲ್ಲ ಎಂದು ವಾಗ್ದಾಳಿ ನಡೆಸಿದರು.
ಧರಣಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಸ್ವರೂಪ್ ಪ್ರಕಾಶ್, ಹರೀಶ್ಗೌಡ, ಜವರಾಯಿ ಗೌಡ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಂ.ಟಿ.ಕೃಷ್ಣಪ್ಪ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಗ್ಯಾರಂಟಿಗೆ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಬಳಕೆ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಎಂ ವೆಂಕಟಸ್ವಾಮಿ, ದುರ್ಬಳಕೆ ಆಗಿರುವ ದಲಿತ ಜನಾಂಗಗಳ ಹಿಂಬಾಕಿ ಹಣವನ್ನು ಇಂದಿನ ಬಜೆಟ್ ಮೂಲಕ ವಾಪಸ್ ನೀಡಬೇಕು. ದಲಿತ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು.
2025-26ರ ಬಜೆಟ್ನಲ್ಲಿ ಎಸ್.ಸಿ, ಎಸ್.ಟಿ ಸಮುದಾಯಗಳ ಹಣವನ್ನು ಗ್ಯಾರಂಟಿಗಳಿಗೆ ಬಳಸದೇ ಅವರ ಅಭಿವೃದ್ಧಿಗಾಗಿ ಮಾತ್ರ ಬಳಸುವಂತಾಗಬೇಕು. ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆಯಲ್ಲಿ ಬೇರೆ ಉದ್ದೇಶಗಳಿಗೆ ದುರ್ಬಳಕೆ ಮಾಡಲು ಅವಕಾಶ ಮಾಡಿಕೊಡಿರುವ 7ಡಿ ಕಲಂ ಅನ್ನು ರದ್ದುಪಡಿಸಿದ ಹಾಗೆ 7ಸಿ ಕಲಂ ಅನ್ನು ಕೂಡ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ಜಾರಿಗೆ ಆಗ್ರಹ: ಸುಪ್ರೀಂಕೋರ್ಟ್ ತೀರ್ಪಿನಂತೆ ಸಚಿವ ಸಂಪುಟದಲ್ಲಿ ನಿರ್ಧರಿಸಿ ತಕ್ಷಣ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರದ ವತಿಯಿಂದ ಧರಣಿ ನಡೆಸಲಾಯಿತು.
ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು. ಮತ್ತು ಯಾವುದೇ ಹೊಸ ಅಧಿಸೂಚನೆ ಅಥವಾ ಮುಂಬಡ್ತಿ ಆದೇಶ ಹೊರಡಿಸಬಾರದು. ಭಾರತೀಯ ಯೋಜನಾ ಆಯೋಗದ ನಿಯಮಗಳ ಅನುಸಾರವೇ ಎಸ್ಸಿ-ಎಸ್ಪಿ, ಟಿಎಸ್ಪಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ಎಸ್ಸಿ-ಎಸ್ಪಿ, ಟಿಎಸ್ಪಿ ನಿಧಿಯನ್ನು ಗ್ಯಾರಂಟಿ ಯೋಜನೆ ಅಥವಾ ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಬಾರದು ಎಂದು ಧರಣಿನಿರತರು ಆಗ್ರಹಿಸಿದರು.
ಒಳಮೀಸಲಾತಿ ಜಾರಿಗೊಳಿಸಬಹುದಾದರೂ ಕಾಂಗ್ರೆಸ್ ಸರಕಾರ ವಿನಾಕಾರಣ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ಆಯೋಗವನ್ನು ರಚಿಸುವ ಕಾಲಹರಣ ತಂತ್ರವನ್ನು ಹೂಡಿದ್ದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಎರಡು ತಿಂಗಳುಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಬೇಕಿದ್ದ ಏಕಸದಸ್ಯ ಆಯೋಗ ಇಂದು ಸರಕಾರಿ ಇಲಾಖೆಗಳು ದತ್ತಾಂಶದ ಮಾಹಿತಿ ನೀಡುತ್ತಿಲ್ಲವೆಂದು ಅಹವಾಲು ಸಲ್ಲಿಸಿರುವುದು, ಒಳಮೀಸಲಾತಿ ಜಾರಿ ಮಾಡಲು ಇಷ್ಟವಿಲ್ಲದ ಸರಕಾರದ ಕಾಲಹರಣ ತಂತ್ರವನ್ನು ಬಯಲಿಗೆಳೆದಿದೆ. ಆದ್ದರಿಂದ ಸರಕಾರ ತಕ್ಷಣ ತನ್ನ ವಿಳಂಬ ನೀತಿಯನ್ನು ಬದಿಗಿಟ್ಟು ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ, ಎಂಆರ್ಪಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿ ಜೆ.ಎಂ.ದೇವರಾಜ್, ರಾಜ್ಯ ಉಪಾಧ್ಯಕ್ಷ ಹುಲುಗಪ್ಪ, ಡಾ.ಎಸ್ ರಾಮಕೃಷ್ಣ, ರಾಜ್ಯ ವಕ್ತಾರ ವೆಂಕಟೇಶ ಕತ್ತಿ ಮತ್ತಿತರರು ಹಾಜರಿದ್ದರು.
ಕನಿಷ್ಠ ವೇತನ ನಿಗದಿಗೆ ಧರಣಿ: 31 ಸಾವಿರ ರೂ. ಕನಿಷ್ಠ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ವತಿಯಿಂದ ಧರಣಿ ನಡೆಸಲಾಯಿತು.
ಗ್ರಾ.ಪಂ ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ ಪ್ರತಿ ತಿಂಗಳು 6000 ಸಾವಿರ ರೂ. ಪಿಂಚಣಿ ನಿಗದಿ ಮಾಡಬೇಕು. ಸ್ವಚ್ಛವಾಹಿನಿ ನೌಕರರಿಗೆ ತರಬೇತಿ ಪಡೆದ ಎಲ್ಲರಿಗೂ ಉದ್ಯೋಗ ನೀಡಬೇಕು. ಒಡಂಬಡಿಕೆ ಮತ್ತು ವಾರ್ಷಿಕ ನವೀಕರಣ ರದ್ದು ಪಡಿಸಬೇಕು. ಗ್ರಾ.ಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನರು, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರಕಾರಿ ನೌಕರರನ್ನಾಗಿ ಘೋಷಣೆ ಮಾಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.