ರೇಣುಕಾಸ್ವಾಮಿ ಕೊಲೆ ಪ್ರಕರಣ | ಪಕ್ಷದ ಆಧಾರದ ಮೇಲೆ ತನಿಖೆ ನಡೆಯುತ್ತಿಲ್ಲ: ಜಿ.ಪರಮೇಶ್ವರ್
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪಕ್ಷದ ಆಧಾರದ ಮೇಲೆ ನಡೆಯುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತಪ್ಪಿತಸ್ಥರು ಯಾವುದೇ ಪಕ್ಷದಲ್ಲಿದ್ದರು ತಪ್ಪಿತಸ್ಥರೇ ಆಗಿರುತ್ತಾರೆ. ಬೇರೆ ಪಕ್ಷದಲ್ಲಿದ್ದಾರೆ ಎಂಬುದನ್ನು ಮುಖ್ಯವಾಗಿ ತೆಗೆದುಕೊಳ್ಳುವುದಿಲ್ಲ. ಏನು ತಪ್ಪು ಮಾಡಿದ್ದಾರೆ ಎಂಬ ಆಧಾರದ ಮೇಲೆ ತನಿಖೆ, ವಿಚಾರಣೆ ನಡೆಯುತ್ತದೆ ಎಂದು ಹೇಳಿದರು.
ನಟ ದರ್ಶನ್‍ನನ್ನು ವಿಚಾರಣೆ ನಡೆಸಲು ಇನ್ನೊಂದು ವಾರ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಕೇಳಿದ್ದರು. ಆದರೆ ಎರಡು ದಿನ ಕಸ್ಟಡಿಗೆ ನೀಡಿದೆ. ಎರಡು ದಿನದ ಬಳಿಕ ವಿಚಾರಣೆ ಮುಗಿದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ ಎಂದು ತಿಳಿಸಿದರು.
ಜೈಲಿನಲ್ಲಿ ಎಲ್ಲ ಸೌಲಭ್ಯಗಳು ಸಿಗುತ್ತವೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಕೆಲವು ಸಂದರ್ಭದಲ್ಲಿ ಸತ್ಯ ಇರಬಹುದು. ಜೈಲುಗಳ ಮೇಲೆ ದಾಳಿ ನಡೆದಾಗ ಫೋನ್ ಸೇರಿದಂತೆ ಬೇರೆ ಬೇರೆ ವಸ್ತುಗಳು ಸಿಕ್ಕಿವೆ. ಅಧಿಕಾರಿಗಳ ಕಣ್ತಪ್ಪಿಸಿ ನಡೆದಿರುತ್ತದೆ. ಇಂತಹ ಘಟನೆಗಳಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಸೇರಿದಂತೆ ಎಂಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರದರ್ಶನದ ಕುರಿತ ವರಿದಿಗೆ ಸಮಿತಿ ರಚನೆಯ ಕುರಿತು ಮಾತನಾಡಿ, ಕರ್ನಾಟಕದ ಬಗ್ಗೆ ಎಐಸಿಸಿ ಮಟ್ಟದಲ್ಲಿ ಬೇರೆಯೇ ನಿರೀಕ್ಷೆ ಇತ್ತು. 15ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಅವರು ಹೈಕಮಾಂಡ್‍ಗೆ ತಿಳಿಸಿದ್ದರು. ಅದು ಆಗಲಿಲ್ಲ. ಯಾವ ಕಾರಣಕ್ಕಾಗಿ ಹೀಗಾಗಿದೆ. ನಮ್ಮ ಸರಕಾರ ಇದ್ದಾಗಿಯೂ ಇಷ್ಟು ಸ್ಥಾನ ಕಡಿಮೆಯಾಗಿದೆಯಲ್ಲ ಎಂದು ನಿಖರವಾದ ಕಾರಣವನ್ನು ಕಂಡುಕೊಳ್ಳಬೇಕಿದೆ ಎಂದು ಪರಮೇಶ್ವರ್ ತಿಳಿಸಿದರು.