ನಕ್ಸಲ್ ಕಾರ್ಯಕರ್ತರು ಶಸ್ತ್ರ ತ್ಯಜಿಸಿ, ಮುಖ್ಯವಾಹಿನಿಗೆ ಬನ್ನಿ : ಜಿ.ಪರಮೇಶ್ವರ್
ಬೆಂಗಳೂರು : ಶಸ್ತ್ರ ತ್ಯಜಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಜೀವನ ನಡೆಸಲು ಇಚ್ಛಿಸುವ ನಕ್ಸಲ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ರಾಜ್ಯ ಸರಕಾರ ಅಗತ್ಯ ನೆರವು ನೀಡಲು ಬದ್ಧವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವವರು, ಕಳೆದೊಂದು ವಾರದಿಂದ ನಕ್ಸಲ್ ಚಟುವಟಿಕೆಗಳ ಮೇಲೆ ಪೊಲೀಸರು ಮೇಲೆ ನಿಗಾವಹಿಸಿದ್ದರು. ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು ಎಂದರು.
ನಿನ್ನೆ ಕೂಂಬಿಂಗ್ ವೇಳೆ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರಿಸಿದ್ದರು. ಕಾರ್ಯಾಚರಣೆ ವೇಳೆ ಪೊಲೀಸರು ಕಂಡ ತಕ್ಷಣ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ವಿಕ್ರಂ ಗೌಡ ಮೇಲೆ ಎನ್‍ಕೌಂಟರ್ ಮಾಡಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಪರಮೇಶ್ವರ್ ಉಲ್ಲೇಖಿಸಿದರು.
ಇದೇ ವೇಳೆ ಇಬ್ಬರು-ಮೂವರು ತಪ್ಪಿಸಿಕೊಂಡಿದ್ದಾರೆ ಎಂಬುದು ಮಾಹಿತಿ ಸಿಕ್ಕಿದೆ ಎಂದ ಅವರು, ಈ ಹಿಂದೆ ಪಾವಗಡ ಸೇರಿದಂತೆ ಹಲವು ಭಾಗಗಳಲ್ಲಿ ನಕ್ಸಲೀಯರು ಶರಣಾಗಿದ್ದರು. ಈಗಲೂ ಆ ಯೋಜನೆ ಚಾಲ್ತಿಯಲ್ಲಿದೆ. ಶಸ್ತ್ರ ತ್ಯಜಿಸಿ ಶರಣಾಗಲು ಬಯಸುವ ನಕ್ಸಲರಿಗೆ ಸರಕಾರ ಅಗತ್ಯ ನೆರವು ನೀಡಲಿದೆ ಎಂದು ನುಡಿದರು.