ಒಪಿಎಸ್ ಜಾರಿಗೆ ಸರಕಾರ ಬದ್ಧ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಹಳೆ ಪಿಂಚಣಿ ವ್ಯವಸ್ಥೆ(ಒಪಿಎಸ್)ಯನ್ನು ಜಾರಿ ಮಾಡಲು ನಾವು ಬದ್ಧರಾಗಿದ್ದೇವೆ. ಈ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಭಾ ನಾಯಕ ಭೋಸರಾಜ್ ಉತ್ತರ ನೀಡುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಡಾ.ಜಿ.ಪರಮೇಶ್ವರ್, ನಾನು ಪ್ರಣಾಳಿಕಾ ಸಮಿತಿ ಅಧ್ಯಕ್ಷನಾಗಿದ್ದೆ. ನಾವು ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುತ್ತೇವೆ. ಇಂದಾದರೂ ಆಗಬಹುದು, ನಾಳೆ ಆಗಬಹುದು. ಈಗ ಕೇಂದ್ರ ಸರಕಾರಕ್ಕೂ ಮನವರಿಕೆಯಾಗಿದೆ. ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದರು.
ಎನ್‍ಪಿಎಸ್ ಹಾಗೂ ಒಪಿಎಸ್ ನಡುವೆ ಸಾಕಷ್ಟು ಗೊಂದಲವಿದೆ. ಏನೇ ಇದ್ದರೂ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. ಒಪಿಎಸ್ ಅನುಷ್ಠಾನದ ವಿಷಯದಲ್ಲಿ ಸ್ವಲ್ಪ ವಿಳಂಬವಾಗಬಹುದು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇದಕ್ಕೂ ಮುನ್ನ ಸಭಾನಾಯಕ ಭೋಸರಾಜ್ ಉತ್ತರಿಸಿ, ನಮ್ಮ ಸರಕಾರ ಬಂದ ಮೇಲೆ ಒಪಿಎಸ್ ಜಾರಿ ಬಗ್ಗೆ ಸಭೆ ನಡೆಸಲಾಗಿದೆ. ಆದಷ್ಟು ಬೇಗ ನಾವು ಇದನ್ನು ಬಗೆಹರಿಸುತ್ತೇವೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಒಪಿಎಸ್ ಕೊಡುತ್ತೀರೋ, ಇಲ್ಲವೋ ಹೇಳಿ ಬಿಡಿ. ಅನೇಕರಿಗೆ ಒಂದೊಂದು ರೂಪಾಯಿಗೂ ಸಮಸ್ಯೆಯಾಗಿದೆ. ಬೇರೆ ರಾಜ್ಯದಲ್ಲಿ ಆಗಿದೆ. ನೀವು ಯಾವಾಗ ಅನುಷ್ಠಾನ ಮಾಡುತ್ತೀರಿ ಹೇಳಿ, ಕೊಟ್ಟ ಮಾತಿನಂತೆ ನಡೆಯಿರಿ ಎಂದರು.