ಕೇಂದ್ರ ಸರಕಾರದ ನೀತಿಗಳಿಂದಲೇ ಬೆಲೆ ಏರಿಕೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು :ಕೇಂದ್ರ ಸರಕಾರದ ನೀತಿಗಳಿಂದಲೇ ಬೆಲೆ ಏರಿಕೆ ಆಗುತ್ತಿದ್ದು, ತೆರಿಗೆ ವಿಚಾರದಲ್ಲಿ ಕೇಂದ್ರವೇ ಹೆಚ್ಚು ನಿಯಂತ್ರಣ ಹೊಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ 2 ರೂಗೆ ಏರಿಕೆ ಸ್ವಾಭಾವಿಕ. ಆದರೆ, ಕೇಂದ್ರ ಸರಕಾರ ತೆರಿಗೆ ನಿಯಂತ್ರಿಸಿದರೆ ರಾಜ್ಯಗಳಿಗೆ ಅನುಕೂಲವಾಗುತ್ತದೆ.ಜತೆಗೆ ರಾಜ್ಯ ಸರಕಾರಗಳ ಕಾರ್ಯಕ್ರಮಗಳಿಗೆ ಸಹಾಯ ಆಗಲಿದೆ ಎಂದು ಹೇಳಿದರು.
ವಕ್ಫ್ ತಿದ್ದುಪಡಿ ಮಸೂದೆ ವಿಚಾರ ಕುರಿತು ಪ್ರತಿಕ್ರಿಯಿಸಿ ಲೋಕಸಭೆಯಲ್ಲಿ ವಕ್ಫ್ ಮಸೂದೆಗೆ ಸಾಕಷ್ಟು ವಿರೋಧ ವ್ಯಕ್ತವಾದರೂ, 288 ಜನ ಸದಸ್ಯರು ಇದರ ಪರವಾಗಿ ಮತ ಚಲಾಯಿಸಿದ್ದಾರೆ. ಈ ಕಾರಣದಿಂದಾಗಿ, ರಾತ್ರಿ ಒಂದು ಗಂಟೆಗೆ ಮಸೂದೆಯು ಅಂಗೀಕಾರಗೊಂಡಿದೆ. ಆದರೆ, ಈ ನಿರ್ಧಾರಕ್ಕೆ ಬಹಳಷ್ಟು ಜನರಿಂದ ವಿರೋಧವಿದೆ ಎಂದರು.
ವಿಧಾನಸಭೆಯಿಂದ 18 ಬಿಜೆಪಿ ಶಾಸಕರ ಅಮಾನತು ಕುರಿತ ಪ್ರಶ್ನೆಗೆ, "ಇದು ಸಭಾಧ್ಯಕ್ಷರಿಗೆ ಬಿಟ್ಟ ವಿಷಯವಾಗಿದ್ದು, ಇದರಲ್ಲಿ ಸರಕಾರದ ಪಾತ್ರ ಇಲ್ಲ. ಸ್ಪೀಕರ್ ಆಯ್ಕೆಯಲ್ಲಿ ಎಲ್ಲರೂ ಒಮ್ಮತದಿಂದ ಭಾಗಿಯಾಗಿದ್ದು, ಬಿಜೆಪಿಯವರು ಸಹ ಇದನ್ನು ಬೆಂಬಲಿಸಿದ್ದರು. ಆದರೆ, ಸಭಾಧ್ಯಕ್ಷರ ಪೀಠದ ಬಳಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಪೀಕರ್ ಎಷ್ಟೇ ಪರಿಪರಿಯಾಗಿ ಕೇಳಿಕೊಂಡರೂ, ಬಿಜೆಪಿಯವರು ಅವರ ಮಾತಿಗೆ ಗೌರವ ಕೊಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.