‘ಈಗ ಭಾರತ ಮಾತಾಡಬೇಕಾಗಿದೆ’ ಪುಸ್ತಕ ನಿಜಕ್ಕೂ ಸುಡುಕೆಂಡದಂತಿದೆ: ಜಿ.ಎನ್.ಮೋಹನ್
ಶಶಿಕಾಂತ ಸೆಂಥಿಲ್, ದೇವನೂರ ಮಹಾದೇವ, ಎ.ಎಸ್.ಪುತ್ತಿಗೆ ಬರೆದ ಪುಸ್ತಕ ಲೋಕಾರ್ಪಣೆ

ಬೆಂಗಳೂರು : ‘ಈಗ ಭಾರತ ಮಾತಾಡಬೇಕಾಗಿದೆ’ ಎಂಬ ಪುಸ್ತಕ ನಿಜಕ್ಕೂ ಸುಡುಕೆಂಡದಂತಿದೆ. ಇಂದು ಇಡೀ ಭಾರತವನ್ನು ಸುಡುತ್ತಿರುವ ಕೆಂಡದ ಬಗ್ಗೆ ಬರೆದಿರುವಂತಹ ಲೇಖನಗಳ ಗುಚ್ಛ ಇದಾಗಿದ್ದು, ನಾನೀಗ ಸುಡು ಕೆಂಡವನ್ನು ಕೈಯಲ್ಲಿಡಿದು ಮಾತನಾಡುತ್ತಿದ್ದೇನೆ’ ಎಂದು ಲೇಖಕ ಹಾಗೂ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅಭಿಪ್ರಾಯಪಟ್ಟರು.
ರವಿವಾರ ವಿಧಾನಸೌಧದ ಪುಸ್ತಕ ಮೇಳದಲ್ಲಿರುವ ವೇದಿಕೆ-1ರಲ್ಲಿ ನಡೆದ ಶಶಿಕಾಂತ ಸೆಂಥಿಲ್, ದೇವನೂರ ಮಹಾದೇವ ಹಾಗೂ ಎ.ಎಸ್.ಪುತ್ತಿಗೆ ಅವರು ಬರೆದ ‘ಈಗ ಭಾರತ ಮಾತಾಡಬೇಕಾಗಿದೆ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.
‘ಕೆಂಡದ ಮೇಲೆ ನಡೆದವನಿಗೆ ಮಾತ್ರವೇ ಕೆಂಡದ ಬಿಸಿಯನ್ನು ಬಣ್ಣಿಸಲು ಸಾಧ್ಯ’ ಎಂದು ಕವಿ ಸು.ರಂ. ಎಕ್ಕುಂಡಿ ಹೇಳಿದ್ದರು. ಈಗ ಭಾರತವನ್ನು ಪ್ರೀತಿಸುವ ನಮ್ಮೆಲ್ಲರಿಗೂ ಕೆಂಡದ ಮೇಲೆ ನಡೆದಂತಹ ಅನುಭವವಾಗುತ್ತಿದೆ ಎಂದು ಜಿ.ಎನ್.ಮೋಹನ್ ತಿಳಿಸಿದರು.
ನಮಗೆಲ್ಲರಿಗೂ ಏಕೆ ಕೆಂಡದ ಮೇಲೆ ನಡೆಯುವಂತಹ ಸ್ಥಿತಿ ಬಂದಿದೆ ಎಂಬುದನ್ನು ಗಮನಿಸಿದರೆ ಯಾವ ಸಂವಿಧಾನ ನಮ್ಮನ್ನು ಕಾಯುತ್ತಿತ್ತೋ, ಯಾವ ಸಂವಿಧಾನ ನಮ್ಮ ರಕ್ಷಣೆಗಿದೆಯೋ ಅಂತಹ ಸಂವಿಧಾನವನ್ನೇ ಅಸ್ತಿರಗೊಳಿಸುವಂತಹ ಕುತಂತ್ರ ಈ ದೇಶದಲ್ಲಿ ನಡೆಯುತ್ತಿದೆ ಎಂದು ಜಿ.ಎನ್. ಮೋಹನ್ ಹೇಳಿದರು.
ಡಾ.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನಕ್ಕೆ ಪ್ರತಿಯಾಗಿ ಇನ್ನೊಂದು ಸಂವಿಧಾನವನ್ನು ಮಂಡಿಸುತ್ತೇವೆ ಎಂದು ಧರ್ಮ ಸಂಸತ್ತು ಘೋಷಣೆ ಮಾಡಿದೆ. ಇದಕ್ಕೆ ಕೆಲ ಬುದ್ಧಿಜೀವಿಗಳು ಸಂವಿಧಾನ ಎನ್ನುವ ಪದವನ್ನೇ ಅದಕ್ಕೆ ಸೇರಿಸಬಾರದೆಂದು ಖಂಡನೆ ವ್ಯಕ್ತಪಡಿಸಿದೆ. ಸಂವಿಧಾನ ಎನ್ನುವುದು ಒಂದೇ. ಅದು, ಅಂಬೇಡ್ಕರ್ ನೇತೃತ್ವದಲ್ಲಿ ರೂಪಿಸಿದಂತಹ ಸಂವಿಧಾನ ಮಾತ್ರ. ಈ ಸಂವಿಧಾನ ದೇಶದ ಎಲ್ಲರ ನೋವುಗಳ ಮೊತ್ತವನ್ನು ಬಗೆಹರಿಸಲು ಇರುವಂತಹ ಒಂದು ಪರಿಹಾರದ ಗ್ರಂಥವಾಗಿದೆ ಎಂದು ಜಿ.ಎನ್.ಮೋಹನ್ ತಿಳಿಸಿದರು.
‘ಈಗ ಭಾರತ ಮಾತಾಡಬೇಕಾಗಿದೆ’ ಎಂಬ ಪುಸ್ತಕ ನಿಜಕ್ಕೂ ದಿನವೂ ನಿಟ್ಟುಸಿರುವ ಬಿಡುತ್ತಿರುವಂತಹ ಭಾರತ ಜನರ ಕಥನವಾಗಿದೆ. ಈ ಪುಸ್ತಕವನ್ನು ಬರೆದಿರುವ ದೇವನೂರ ಮಹಾದೇವ, ಎ.ಎಸ್.ಪುತ್ತಿಗೆ ಹಾಗೂ ಶಶಿಕಾಂತ್ ಸೆಂಥಿಲ್ ಅವರು ನಮ್ಮ ಆತ್ಮಸಾಕ್ಷಿಗಳಾಗಿದ್ದಾರೆ. ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಲೇ ಬೇಕಾದ ಅನಿವಾರ್ಯತೆಯಿದೆ ಎಂದು ಜಿ.ಎನ್.ಮೋಹನ್ ಹೇಳಿದರು.
ಪ್ರಾಧ್ಯಾಪಕ ರವಿಕುಮಾರ್ ಬಾಗಿ ಮಾತನಾಡಿ, ದೇಶ ಅವನತಿಯತ್ತ ಚಲಿಸುತ್ತಿದೆ, ನಮ್ಮನ್ನು ಮೌಢ್ಯಕ್ಕೆ ಕೊಂಡೊಯ್ಯಲಾಗುತ್ತಿದೆ. ಮತ, ಧರ್ಮಗಳ ಗಲೀಜು ಹೆಚ್ಚಾದಷ್ಟು ಮಾನವೀಯ ಮೌಲ್ಯಗಳು ಕುಸಿಯಲಾರಂಭಿಸುತ್ತವೆ. ಇದೆಲ್ಲವನ್ನೂ ಸೆಟೆದು ನಿಲ್ಲಲು ಈಗ ಭಾರತ ಮಾತನಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಲೇಖಕ ರಾಜಪ್ಪ ದಳವಾಯಿ, ಲೇಖಕಿ ಡಾ.ನಮನ, ಪ್ರಕಾಶಕ ಅಭಿರುಚಿ ಗಣೇಶ್, ಜಿ.ವಿ.ಧನಂಜಯ ಸೇರಿದಂತೆ ಹಲವರು ಇದ್ದರು.
ಈಗಲೂ ಭಯದಲ್ಲೇ ಮಾತನಾಡುತ್ತಿದ್ದೇವೆ: ‘ಭಾರತ ಎಂದರೆ ಬರೀ ಭೂಮಿಯಲ್ಲ, ಬರೀ ಭೂಪಟವಲ್ಲ, ಭಾರತ ಎಂದರೆ ಪ್ರಜೆಗಳು. ಸುಮಾರು 200 ವರ್ಷಗಳ ಕಾಲ ಭಾರತಕ್ಕೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಗಾಂಧಿ, ಅಂಬೇಡ್ಕರ್ ಬಂದ ಮೇಲೆ, ಅವರು ಸಂವಿಧಾನ ಕೊಟ್ಟ ಮೇಲೆ ನಾವು ಸ್ವಲ್ಪ ಮಾತನಾಡಲು ಪ್ರಾರಂಭಿಸಿದ್ದೇವೆ, ಈಗಲೂ ನಾವುಗಳ ಸಂಪೂರ್ಣ ಮಾತನಾಡಲು ಶುರು ಮಾಡಿಲ್ಲ, ಭಯದಲ್ಲೇ ಹೆದರಿಕೊಂಡು ಮಾತನಾಡುತ್ತಿದ್ದೇವೆ. ಇದನ್ನು ತೊರೆದು ನಾವು ಭಯ, ಭೀತಿಯಿಲ್ಲದೆ ಸ್ವತಂತ್ರವಾಗಿ ಮಾತನಾಡಬೇಕಿದೆ’ ಎಂದು ಹಿರಿಯ ಸಾಹಿತಿ ಎಲ್.ಎನ್.ಮುಕುಂದರಾಜ್ ತಿಳಿಸಿದರು.