87ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ: ಮಹೇಶ್ ಜೋಶಿ
ಗೊ.ರು.ಚನ್ನಬಸಪ್ಪ
ಬೆಂಗಳೂರು : ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಆಯ್ಕೆ ಆಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.
ಬುಧವಾರ ನಗರದ ಕಸಾಪದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಹಲವು ಮಂದಿ ಹಿರಿ-ಕಿರಿಯರ ಹೆಸರುಗಳು ಪ್ರಸ್ತಾಪವಾಗಿದ್ದವು. ಅದರಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಮತ್ತು ಹಿರಿತನವನ್ನು ಆಧರಿಸಿ, ಸಮ್ಮೇಳನದ ಅಧ್ಯಕ್ಷರನ್ನಾಗಿ ಗೊ.ರು.ಚನ್ನಬಸಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ನಾಡೋಜ ಹಂಪ ನಾಗರಾಜಯ್ಯ, ಸಿದ್ಧಲಿಂಗ ಪಟ್ಟಣಶೆಟ್ಟಿ, ಸುಧಾಮೂರ್ತಿ, ಡಾ.ಲತಾ ರಾಜಶೇಖರ್, ನಾ.ಮೊಗಸಾಲೆ ಅವರ ಹೆಸರುಗಳು ಚರ್ಚೆಯಲ್ಲಿದ್ದು, ಇವರೆಲ್ಲರಿಗಿಂತ ಹಿರಿಯರಾದ ಗೊ.ರು.ಚ ಅವರನ್ನು ಆಯ್ಕೆ ಮಾಡಲಾಯಿತು. ಗೊ.ರು.ಚ ಅವರು ಜಾನಪದ ಭೀಷ್ಮ, ನಾಡು, ನುಡಿ ಜಲದ ಬಗ್ಗೆ ಅಪಾರ ತುಡಿತ ಇರುವ ಚಿಂತಕರು. ಕನ್ನಡ ಸಾಹಿತ್ಯ ಪರಿಷತ್ ಬೆಳೆಸುವಲ್ಲಿ ವಹಿಸಿದ ಪಾತ್ರ ಗಮನಾರ್ಹ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ನಡೆಯಬೇಕಾದ ಗೋಷ್ಠಿಗಳು ಮತ್ತು ಗೋಷ್ಠಿಯ ಅಧ್ಯಕ್ಷರನ್ನು ಶೀಘ್ರದಲ್ಲೇ ನೇಮಿಸಲಾಗುವುದು. ಸಮ್ಮೇಳನ ನಡೆಸಲು ಸರಕಾರಕ್ಕೆ 30 ಕೋಟಿ ರೂ ಅನುದಾನ ಕೇಳಿದ್ದು, 25 ಕೋಟಿ ರೂ ನೀಡಲು ಸರಕಾರದ ಆದೇಶವಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಮತ್ತಿತರರು ಉಪಸ್ಥಿತರಿದ್ದರು.
1942ರಿಂದ 95ರ ವರೆಗೆ ಕಸಾಪ ಅಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ :
1942ರಿಂದ 95ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೋಂಡೆದಹಳ್ಳಿಯಲ್ಲಿ 1930ರ ಮೇ.18ರಂದು ಜನಿಸಿದರು. ಗಾಂಧಿ ಗ್ರಾಮದಲ್ಲಿ ಸಮಾಜ ಶಿಕ್ಷಣವನ್ನು ಪಡೆದ ಗೊರುಚ ಅವರು ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲಿ ಕೆಲಸ ಮಾಡಿದ್ದಾರೆ.
ಭಾರತ್ ಸ್ಕೌಟ್ಸ್ ಗೆಡ್ಸ್ಗಳಿಗೆ ಹೆಡ್ಕ್ವಾರ್ಟರ್ಸ್ ಕಮೀಷನರ್, 2008ರಿಂದ ಕರ್ನಾಟಕ ಜಾನಪದ ಅಕಾಡಮಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಪ್ರಗತಿಪಥ, ಸಾಕ್ಷಿಕಲ್ಲು, ಬಾಗೂರು ನಾಗಮ್ಮ, ಗ್ರಾಮಗೀತೆಗಳು, ಕರ್ನಾಟಕ ಜನಪದ ಕಲೆಗಳು, ಹೊನ್ನ ಬಿತ್ತೇವು ನೆಲಕೆಲ್ಲ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ವೇಳೆ 1993ರಲ್ಲಿ ಕೊಪ್ಪಳ, 1994ರಲ್ಲಿ ಮಂಡ್ಯ 1995ರಲ್ಲಿ ಮುಧೋಳಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರ ಅವಧಿಯಲ್ಲಿ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದು, ‘ಜಾನಪದ ಜಗತ್ತು’, `ಪಂಚಾಯತ್ ರಾಜ್ಯ’, `ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಮೊದಲಾದ ಪತ್ರಿಕೆಗಳಿಗೆ ಸಂಪಾದಕರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ.
‘ಈ ಬಾರಿ ಸಾಹಿತ್ಯ ಸಮ್ಮೇಳದ ಅಧ್ಯಕ್ಷರನ್ನಾಗಿ ಮಹಿಳೆಯರನ್ನು ಆಯ್ಕೆ ಮಾಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದ್ದು, ಎಲ್ಲರ ಅಭಿಪ್ರಾಯವನ್ನು ಗೌರವದಿಂದ ಪರಿಗಣಿಸಿದ್ದೇವೆ. ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ, ಹಿರಿತನ ಮತ್ತು ಅವರ ಸೇವೆಯನ್ನು ಗಮನಿಸಿ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿದ್ದೇವೆ.
-ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಮಂಡ್ಯದಲ್ಲಿ ಡಿಸೆಂಬರ್ 20,21 ಮತ್ತು 22ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸರಾದ ಗೊ.ರು.ಚನ್ನಬಸಪ್ಪ ಅವರು ಆಯ್ಕೆಯಾಗಿದ್ದಾರೆ. ಅವರ ಜ್ಞಾನದ ಹರವು ವಿಸ್ತಾರವಾದುದು. ಕನ್ನಡ ಭಾಷೆಯ ಎರಡು ಪ್ರಧಾನ ಧಾರೆಗಳಾದ ಲಿಖಿತ ಮತ್ತು ಮೌಖಿಕ ಪರಂಪರೆಗಳ ಬಗೆಗೆ ಅಧಿಕೃತವಾಗಿ ಮಾತಾಡಬಲ್ಲ ಅಪೂರ್ವ ವಿದ್ವಾಂಸರು. ವಚನಗಳ ಅಧ್ಯಯನಕ್ಕೆ ಆಧುನಿಕ ವೈಚಾರಿಕತೆಯ ಆಯಾಮ ನೀಡಿದ ಅವರು ಬರೆವಣಿಗಳಿಂದ ದಣಿದವರಲ್ಲ. ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಅಭಿನಂದನೆಗಳು’
-ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ