ಬಿಜೆಪಿಯಿಂದ ರಾಜ್ಯಪಾಲರ ಹುದ್ದೆ ದುರ್ಬಳಕೆ : ದಲಿತ ಸಂಘರ್ಷ ಸಮಿತಿ
ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರದ್ಧ ರಾಜಕೀಯವಾಗಿ ಕುತಂತ್ರ ಹೂಡಿರುವ ಮೈತ್ರಿಪಕ್ಷದ ಪಿತೂರಿ ಖಂಡನೀಯವಾಗಿದ್ದು, ಇದನ್ನು ಮುಂದುವರೆಸಿದರೆ ‘ಗವರ್ನರ್ ಹಟಾವೋ ಸಂವಿಧಾನ ಬಚಾವೋ’ ಹೋರಾಟಕ್ಕೆ ಕರೆ ನೀಡಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.
ಬುಧವಾರ ಸಮಿತಿಯ ರಾಜ್ಯ ಸಂಚಾಲಕ ಅಣ್ಣಯ್ಯ ಪ್ರಕಟನೆ ಹೊರಡಿಸಿದ್ದು, ರಾಜ್ಯದಲ್ಲಿ ಪ್ರಜಾಸತಾತ್ಮಕವಾಗಿ ಆಯ್ಕೆಯಾದ ಸರಕಾರವನ್ನು ಬಿಜೆಪಿಯು ರಾಜಕೀಯ ಕುತಂತ್ರದಿಂದ ಹಾಗೂ ದ್ವೇಷದ ರಾಜಕಾರಣದಿಂದ ಅಸ್ಥಿರಗೊಳಿಸುವುದಲ್ಲದೆ, ರಾಜ್ಯಪಾಲರ ಹುದ್ದೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರು ಮತ್ತು ಕೇಂದ್ರ ಸರಕಾರದ ನಡೆಯು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾದ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾದ ಕೇಂದ್ರ ಸರಕಾರದ ನಡೆ ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಮುವಾದಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಒತ್ತಡದಿಂದ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿಸಿದ್ದಾರೆ. ಕಾನೂನುಬಾಹಿರವಾದ ಈ ತನಿಖೆಯ ಅನುಮತಿ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.