ರಾಜ್ಯಪಾಲರನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗೆ ʼಅಹಿಂದ ಚಳವಳಿʼ ಆಗ್ರಹ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು: ಸಂವಿಧಾನದ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಆಶಯಗಳ ವಿರುದ್ಧವಾಗಿ ವರ್ತಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರನ್ನು ಅವರ ಸ್ಥಾನದಿಂದ ವಜಾಗೊಳಿಸುವಂತೆ ‘ಅಹಿಂದ ಚಳುವಳಿ’ ಜಂಟಿ ಮುಖ್ಯ ಸಂಚಾಲಕ ವೆಂಕಟೇಶ್ ಗೌಡ ಆಗ್ರಹಿಸಿದ್ದಾರೆ.
ಶನಿವಾರ ಈ ಸಂಬಂಧ ರಾಷ್ಟ್ರಪತಿಗೆ ಪತ್ರ ಬರೆದಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದು ಅಸಂವಿಧಾನಿಕ. ಇದು ಕೇವಲ ಚುನಾಯಿತ ಸರಕಾರದ ಮೇಲಿನ ನೇರ ದಾಳಿಯಷ್ಟೇ ಅಲ್ಲ, ರಾಜ್ಯದ ಜನತೆ ಸ್ಪಷ್ಟ ಬಹುಮತದೊಂದಿಗೆ ಆಯ್ಕೆ ಮಾಡಿರುವ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಕಾರಣಗಳಿಗಾಗಿ ಕೇಂದ್ರ ಸರಕಾರದ ಪ್ರಭಾವದಿಂದಾಗಿ ರಾಜ್ಯಪಾಲರು ಈ ನಿರ್ಧಾರವನ್ನು ಕೈಗೊಂಡಿರುವುದು ಕಂಡು ಬರುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ವಿರುದ್ಧದ ರಾಜಕೀಯ ದುರುದ್ದೇಶಕ್ಕಾಗಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಸೆಕ್ಷನ್ 17ಎಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನೀಡಿರುವ ಕಾರ್ಯರೂಪವನ್ನು ರಾಜ್ಯಪಾಲರು ನಿರ್ಲಕ್ಷಿಸಿದ್ದಾರೆ. ಟಿ.ಜೆ.ಅಬ್ರಹಾಂ ಎಂಬವರು ಮುಖ್ಯಮಂತ್ರಿ ವಿರುದ್ಧ ನೀಡಿರುವ ದೂರಿನಲ್ಲಿ ಯಾವುದೆ ಸತ್ಯಾಂಶವಿಲ್ಲ ಎಂಬುದು ಗೊತ್ತಿದ್ದರೂ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದು ರಾಜಕೀಯ ಷಡ್ಯಂತ್ರವಾಗಿದೆ ಎಂದು ವೆಂಕಟೇಶ್ ಗೌಡ ಆರೋಪಿಸಿದ್ದಾರೆ.
ರಾಜ್ಯಪಾಲರಿಗೂ ಪತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟಿ.ಜೆ.ಅಬ್ರಹಾಂ ನೀಡಿರುವ ಖಾಸಗಿ ದೂರನ್ನು ವಜಾಗೊಳಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರಿಗೆ ವೆಂಕಟೇಶ್ ಗೌಡ ಪ್ರತ್ಯೇಕ ಪತ್ರವನ್ನು ಬರೆದಿದ್ದಾರೆ.