ವಿಧೇಯಕಗಳಿಗೆ ಅನುಮೋದನೆ ನೀಡದೆ ವಾಪಸ್ ಕಳುಹಿಸಿದ ರಾಜ್ಯಪಾಲರು

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು : ರಾಜ್ಯ ಸರಕಾರ ಹಾಗೂ ರಾಜ್ಯಪಾಲರ ನಡುವಿನ ಶೀತಲ ಸಮರ ಮುಂದುವರೆದಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಲ್ಕು ವಿಧೇಯಕಗಳಿಗೆ ಅನುಮೋದನೆ ನೀಡದೆ ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿ ಅನುಮೋದನೆ ಪಡೆದುಕೊಂಡಿದ್ದ 2024ನೆ ಸಾಲಿನ ಕರ್ನಾಟಕ ಮಿನರಲ್ಸ್ ಹಕ್ಕು ಮತ್ತು ಬೇರಿಂಗ್ ಲ್ಯಾಂಡ್ ಟ್ಯಾಕ್ಸ್ ವಿಧೇಯಕ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ, ಕರ್ನಾಟಕ ಸಹಕಾರಿ ಸೊಸೈಟಿಗಳ ತಿದ್ದುಪಡಿ ವಿಧೇಯಕ, ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕವನ್ನು ಅಂಕಿತ ಹಾಕದೆ, ಕೆಲವು ಸ್ಪಷ್ಟನೆಗಳನ್ನು ಕೋರಿ ರಾಜ್ಯಪಾಲರು, ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯಪಾಲರು ಸ್ಪಷ್ಟನೆಗಳನ್ನು ಕೋರಿ ವಿಧೇಯಕಗಳನ್ನು ಹಿಂದಕ್ಕೆ ಕಳುಹಿಸಿರುವ ವಿಚಾರವಾಗಿ ಈಗ ಏನು ಹೇಳುವುದಿಲ್ಲ. ಕಾನೂನು ಇಲಾಖೆ ಮೂಲಕ ಅವರಿಗೆ ಉತ್ತರ ಕಳುಹಿಸುತ್ತೇವೆ ಎಂದರು.