ಕೃಷ್ಣಾ ನದಿ ಸೇತುವೆ ಕಾಮಗಾರಿಯ ಅಂದಾಜು ವೆಚ್ಚ ಏರಿಕೆಗೆ ಸರಕಾರದಿಂದ ಅನುಮತಿ : ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು : "ಜಮಖಂಡಿ ಮತ್ತು ಅಥಣಿ ನಡುವೆ ಕೃಷ್ಣಾ ನದಿಗೆ ಸೇತುವೆ ನಿರ್ಮಾಣದ ಯೋಜನೆಯ ವೆಚ್ಚವನ್ನು 60 ಕೋಟಿಯಿಂದ 99 ಕೋಟಿಗೆ ಏರಿಸುವುದಕ್ಕೆ ಸರಕಾರ ಅನುಮತಿ ನೀಡಿದೆ. ಶೀಘ್ರವೇ ಈ ಸೇತುವೆ ಕಾಮಗಾರಿ ಆರಂಭಿಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಹನುಮಂತಪ್ಪ ನಿರಾಣಿ ಅವರು ಈ ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿದರು.
ಈ ವಿಚಾರದಲ್ಲಿ ನಮ್ಮ ಇಲಾಖೆಯ ತಪ್ಪಿದೆ. ಕಾರಣ ಅವರು ಸೇತುವೆಯ ಎತ್ತರ ಅಂದಾಜು ಮಾಡುವಾಗ ಸರಿಯಾಗಿ ಮಾಡಿಲ್ಲ. ನೀರಿನ ಪ್ರಮಾಣ ಹೆಚ್ಚಾಗಿ ಹರಿದಾಗ ಅದರ ಎತ್ತರದ ಬಗ್ಗೆ ಸರಿಯಾಗಿ ಲೆಕ್ಕಾಚಾರ ಮಾಡಿಲ್ಲ. ದಾವಣಗೆರೆಯ ಗುತ್ತಿಗೆದಾರರಿಗೆ ಇದರ ಗುತ್ತಿಗೆ ನೀಡಿಲಾಗಿದ್ದು, ಆರಂಭದಲ್ಲಿ 24 ತಿಂಗಳಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿತ್ತು.
ಮೊದಲು ಈ ಸೇತುವೆಯನ್ನು 480 ಮೀಟರ್ ನಷ್ಟು ಉದ್ದ, 533 ಮೀ ಎತ್ತರ ಮಾಡಲು ತೀರ್ಮಾನಿಸಲಾಗಿತ್ತು. ಈಗ ಸೇತುವೆ ಗಾತ್ರವನ್ನು ಪರಿಷ್ಕರಿಸಿ ಇದನ್ನು ಕ್ರಮವಾಗಿ 680 ಹಾಗೂ 534 ಮೀ.ಗೆ ಏರಿಕೆ ಮಾಡಲಾಗಿದೆ. ಇದರ ಅಂದಾಜು ವೆಚ್ಚವನ್ನು 60 ಕೋಟಿಯಿಂದ 99 ಕೋಟಿಗೆ ಏರಿಸಲಾಗಿದೆ. ಉಪ ಸಮಿತಿ ಇದಕ್ಕೆ ಅನುಮತಿ ನೀಡಿದ್ದು, ಮಂಡಳಿ ಸಭೆಯಲ್ಲಿ ಇದನ್ನು ಪಾಸ್ ಮಾಡಲಾಗಿದೆ. ಹೆಚ್ಚುವರಿ 40 ಕೋಟಿಗೆ ಸರಕಾರ ಅನುಮತಿ ನೀಡಿದ್ದು, ಆದಷ್ಟು ಬೇಗ ಈ ಕಾಮಗಾರಿ ಆರಂಭಿಸಲಾಗುವುದು” ಎಂದು ತಿಳಿಸಿದರು.