ಹೊರರಾಜ್ಯದಿಂದ ಬಂದವರಿಂದಲೇ ಹೆಚ್ಚು ಅಪರಾಧ : ಜಿ.ಪರಮೇಶ್ವರ್
ಬೆಂಗಳೂರು : ಹೊರ ರಾಜ್ಯದಿಂದ ಬಂದವರಿಂದಲೇ ಹೆಚ್ಚು ಅಪರಾಧ ಪ್ರಕರಣಗಳನ್ನು ನೋಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯದ ಸಾಕಷ್ಟು ಜನರು ಬೆಂಗಳೂರಿಗೆ ಬರುತ್ತಾರೆ. ಹೀಗೆ ಬಂದವರಿಗೆ ಇಲ್ಲಿನ ಸಂಸ್ಕೃತಿ, ಜನರ ಭಾವನೆ ಅರ್ಥ ಆಗುವುದಿಲ್ಲವೋ ಗೊತ್ತಿಲ್ಲ. ಅವರು ವಿಕೃತವಾಗಿ ವರ್ತಿಸುತ್ತಿದ್ದಾರೆ ಎಂದರು.
ಸುಮಾರು ಕಡೆ ಕಟ್ಟಡ ಕಾರ್ಮಿಕರಿಂದ ಅಪರಾಧಗಳು ನಡೆದಿವೆ. ಈ ಬಗ್ಗೆ ಕ್ರಮಕ್ಕೆ ಕಾರ್ಮಿಕ ಇಲಾಖೆಯೊಂದಿಗೆ ಮಾತನಾಡುತ್ತೇನೆ. ಜಂಟಿಯಾಗಿ ಸಭೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ ಆರೋಪಿಯ ಎನ್‍ಕೌಂಟರ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಬಿಹಾರ ಮೂಲದ ವ್ಯಕ್ತಿ ಐದು ವರ್ಷದ ಮಗುವನ್ನು ಕೊಲೆ ಮಾಡಿದ್ದಾನೆ. ಆತನನ್ನು ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಪೊಲೀಸರು ಅವರ ಆತ್ಮರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಕಾಲಿಗೆ ಫೈಯರ್ ಮಾಡಿದ್ದಾರೆ. ಅದು ಬೆನ್ನಿಗೆ ಬಿದ್ದಿದೆ. ಆತನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗುವಾಗಲೇ ಮೃತಪಟ್ಟಿದ್ದಾನೆ ಎಂದು ವರದಿ ಇದೆ. ನಾನು ತಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ತನಿಖೆ ಮಾಡಿದ ನಂತರದಲ್ಲಿ ಸತ್ಯಾಂಶ ಗೊತ್ತಾಗುತ್ತದೆ ಎಂದರು.