ಗ್ರಾಮ ಪಂಚಾಯಿತಿಯ ವಿವಿಧ ಸೇವೆಗಳು ಈಗ ʼವಾಟ್ಸ್ ಆ್ಯಪ್ʼ ಚಾಟ್‌ನಲ್ಲೂ ಲಭ್ಯ
ಬೆಂಗಳೂರು: ದೇಶದಲ್ಲೇ ಪ್ರಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳ ಸ್ವವಿವರ ಹಾಗೂ ವಿವಿಧ ಸೇವೆಗಳನ್ನು ಪಡೆಯುವ ಸಲುವಾಗಿ ನೂತನ ವಾಟ್ಸ್ ಆ್ಯಪ್ ಚಾಟ್ ಆನ್‍ಲೈನ್ ಸೇವೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ನೂತನ ವಾಟ್ಸ್ ಆ್ಯಪ್ ಚಾಟ್ ಆನ್‍ಲೈನ್ ಸೇವೆಗೆ ಚಾಲನೆ ನೀಡಿದ್ದು, ಇದರ ಮೂಲಕ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳನ್ನು ಪಡೆಯಬಹುದಾಗಿದೆ.
ಜತೆಗೆ, ವಿವಿಧ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸಲು, ದೇಶದಲ್ಲೇ ಪ್ರಪ್ರಥಮ ಬಾರಿಗೆವಾಟ್ಸ್ ಆ್ಯಪ್ ಚಾಟ್ ಅನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ಅಭಿವೃದ್ದಿ ಪಡಿಸಿ, ಅನುಷ್ಠಾನಗೊಳಿಸಲಾಗಿದೆ. 82775 06000 ಸಂಖ್ಯೆ ಮೂಲಕ ವಾಟ್ಸ್ ಆ್ಯಪ್ ಚಾಟ್ ಸೇವೆ ಪಡೆಯಬಹುದಾಗಿದೆ.
‘ವಾಟ್ಸ್ ಆ್ಯಪ್ ಚಾಟ್ ಮೂಲಕ ಗ್ರಾ.ಪಂ.ಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ 78 ವರ್ಗಗಳ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದಾಗಿದೆ ಹಾಗೂ ಕುಂದು ಕೊರತೆಯ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬಹುದು’
ಪ್ರಿಯಾಂಕ್ ಖರ್ಗೆ, ಸಚಿವ, ಗ್ರಾಮೀಣಾಭಿವೃದ್ಧಿ ಇಲಾಖೆ