ಭಾರತದಲ್ಲಿನ ಡ್ರಗ್ಸ್ ದಂಧೆಗೆ ಗುಜರಾತ್ ಹೆಬ್ಬಾಗಿಲು : ಕಾಂಗ್ರೆಸ್ ಆಕ್ರೋಶ
ಬೆಂಗಳೂರು : ಕರ್ನಾಟಕದ ಬಗ್ಗೆ ಬಿಜೆಪಿಗಿರುವ ಅಸಹನೆ ಮತ್ತೊಮ್ಮೆ ಬಹಿರಂಗವಾಗಿದೆ, ಕರ್ನಾಟಕಕ್ಕೆ ಹಾಗೂ ಬೆಂಗಳೂರಿಗೆ ಕೆಟ್ಟ ಹೆಸರು ತರಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಈ ಹಿಂದೆ ಬೆಂಗಳೂರನ್ನು ಸಿನ್ ಸಿಟಿ ಎಂದಿತ್ತು, ಈಗ ಉಡ್ತಾ ಬೆಂಗಳೂರು ಎನ್ನುವ ಮೂಲಕ ಕರ್ನಾಟಕದ ಅನ್ನ, ನೀರಿಗೆ, ಕನ್ನಡಿಗರ ಮತಕ್ಕೆ ದ್ರೋಹ ಬಗೆದಿದೆ. ಭಾರತದಲ್ಲಿನ ಡ್ರಗ್ಸ್ ದಂಧೆಗೆ ಗುಜರಾತ್ ಹೆಬ್ಬಾಗಿಲಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಎಕ್ಸ್ ಜಾಲತಾಣದಲ್ಲಿ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಭಾರತದಲ್ಲಿನ ಡ್ರಗ್ಸ್ ದಂಧೆಗೆ ಗುಜರಾತ್ ಹೆಬ್ಬಾಗಿಲಾಗಿದೆ, ಜಗತ್ತಿನಲ್ಲೇ ಅತಿ ದೊಡ್ಡ ಡ್ರಗ್ಸ್ ಸೀಜ್ ಆಗಿದ್ದು ಗುಜರಾತಿನ ಅದಾನಿ ಬಂದರಿನಲ್ಲಿ, ಸುಮಾರು 21 ಸಾವಿರ ಕೋಟಿ ರೂ.ಮೌಲ್ಯದ ಡ್ರಗ್ಸ್ ಸೀಜ್ ಆಗಿತ್ತು. ಮತ್ತೊಮ್ಮೆ ಇದೇ ಬಂದರಿನಲ್ಲಿ 9 ಸಾವಿರ ಕೋಟಿ ರೂ. ಡ್ರಗ್ಸ್ ಸೀಜ್ ಆಗಿತ್ತು ಎಂದು ತಿಳಿಸಿದೆ.
ದೇಶದಲ್ಲಿ ವಶಪಡಿಸಿಕೊಂಡ ಒಟ್ಟು ಮಾದಕವಸ್ತುಗಳ ಅಂಕಿ ಅಂಶದಲ್ಲಿ ಗುಜರಾತಿನದ್ದೆ ಸಿಂಹಪಾಲು, ಶೇ.30ರಷ್ಟು ಮಾದಕವಸ್ತುಗಳು ಗುಜರಾತಿನಿಂದಲೇ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ಇಡೀ ದೇಶಕ್ಕೆ ಮಾದಕವಸ್ತುಗಳು ಗುಜರಾತ್ ಹೆಬ್ಬಾಗಿಲ ಮೂಲಕವೇ ಬರುತ್ತಿದ್ದರೂ ರಾಜ್ಯ ಬಿಜೆಪಿ ‘ಉಡ್ತಾ ಗುಜರಾತ್’ ಎನ್ನುವುದಿಲ್ಲವೇಕೆ? ಅದಾನಿ ಬಂದರಿನಲ್ಲಿ ಇಡೀ ಜಗತ್ತೇ ಬೆಚ್ಚಿಬೀಳುವಷ್ಟು ಡ್ರಗ್ಸ್ ಸಿಕ್ಕಿರುವುದರ ಬಗ್ಗೆ ಬಿಜೆಪಿ ತುಟಿ ಬಿಚ್ಚುವುದಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕಿ, ಸಿನಿಮಾ ನಟಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು, ರಾಜ್ಯಾದ್ಯಂತ ಬಿಜೆಪಿಯ ಕಾರ್ಯಕರ್ತರು ಗಾಂಜಾ ಪೂರೈಕೆ ಮಾಡುವಾಗ ಸಿಕ್ಕಿಬಿದ್ದಿದ್ದರು, ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಯೆ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದನ್ನು ದೇಶ ನೋಡಿದೆ ಎಂದು ಕಾಂಗ್ರೆಸ್ ಹೇಳಿದೆ.
ದೇಶದ ಡ್ರಗ್ಸ್ ಜಾಲದಲ್ಲಿ ಹಲವು ಬಿಜೆಪಿ ನಾಯಕರ ಕೈವಾಡವಿರುವುದನ್ನು ದೇಶ ನೋಡಿದೆ, ಅದೇ ಬಿಜೆಪಿ ಈಗ ಉಡ್ತಾ ಬೆಂಗಳೂರು ಎನ್ನುತ್ತಾ ದೇಶದ ಯುವಕರ ಭವಿಷ್ಯವನ್ನು, ರಾಜ್ಯದ ಹೆಸರನ್ನು ಕೆಡಿಸಿವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಖೇದಕರ ಎಂದು ಕಾಂಗ್ರೆಸ್ ಕಿಡಿಗಾರಿದೆ.