ವಾಲ್ಮೀಕಿ ನಿಗಮದ ಕರ್ಮಕಾಂಡವು ಸಿಎಂ, ಡಿಸಿಎಂಗೆ ಗೊತ್ತಿದ್ದೇ ನಡೆದಿದೆ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಕರ್ಮಕಾಂಡವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ಗೊತ್ತಿದ್ದೇ ನಡೆದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಕರಣದಲ್ಲಿ ಸುಮಾರು 80 ರಿಂದ 85 ಕೋಟಿ ರೂ. ರವಾನೆ ಆಗಿರುವ ಮಾಹಿತಿ ಇದೆ. ರಾಜೀನಾಮೆ ನಿರ್ಧಾರ ಮೊದಲೇ ಆಗಬೇಕಿತ್ತು. ಇಷ್ಟೆಲ್ಲಾ ಕೇವಲ ಒಬ್ಬ ಮಂತ್ರಿಯಿಂದ ಆಗಿರುವುದಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಯೇ ಮಾಡಿರುವುದು ಎಂದು ದೂರಿದರು.
ಆ ಮಂತ್ರಿಗೆ ರಾಜೀನಾಮೆ ನೀಡಿ ಅನ್ನುವ ಧೈರ್ಯ ಇವರಿಗೆ ಇರಲಿಲ್ಲ. ಅದಕ್ಕೆ ಕಾರಣ, ಹಗರಣದಲ್ಲಿ ದೊಡ್ಡ ಮಟ್ಟದ ಕೈಗಳಿವೆ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಈ ಹಗರಣ ನಡೆದಿದೆ. ಅದನ್ನು ಇವರೆಲ್ಲರೂ ಸೇರಿ ಮುಚ್ಚಿಟ್ಟಿದ್ದಾರೆ. ಆ ಅಧಿಕಾರಿ ಸಾವಿನಿಂದ, ಮಾಧ್ಯಮಗಳ ಮೂಲಕ ಇದು ಹೊರ ಬರದೇ ಇದ್ದಿದ್ದರೆ ಮುಚ್ಚಿ ಹಾಕುತ್ತಿದ್ದರು ಎಂದು ಕುಮಾರಸ್ವಾಮಿ ತಿಳಿಸಿದರು.
ಕೇವಲ ಒಂದು ಗಂಟೆಯಲ್ಲಿ ಹಣ ಬಿಡುಗಡೆಯಾಗಲು ಸಹಾಯ ಮಾಡಿದ್ದು ಯಾರು? ಅದೆಲ್ಲಾ ಹೊರಗೆ ಬರಬೇಕು. ತೆಲಂಗಾಣದ ಚುನಾವಣೆಗೆ ಹೋಗಿರುವ ಹಣ ಇದು. ಅಲ್ಲಿಗೆ ಹೋಗಿ ಚುನಾವಣೆ ಉಸ್ತುವಾರಿ, ಜವಾಬ್ದಾರಿ ನಿರ್ವಹಿಸಿದವರು ಯಾರು?. ಯಾರ ಯಾರ ಪಾತ್ರ ಏನಿದೆ?. ಎಲ್ಲವೂ ಹೊರಗೆ ಬರಬೇಕು. ವಾಲ್ಮೀಕಿ ನಿಗಮ ಹಣ ತೆಲಂಗಾಣಕ್ಕೆ ಹೋಗಿದೆ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ದಿಲ್ಲಿಗೆ ಹೋಗಿ ಸಚಿವನಾಗುವುದಕ್ಕಿಂತ ನಾಡಿನ ಜನತೆಯ ಸಮಸ್ಯೆಗೆ ಪರಿಹಾರ ನೀಡಬೇಕು. ನೀರಾವರಿ ವಿಷಯದಲ್ಲಿ ನ್ಯಾಯ ಪಡೆಯಬೇಕು. ಮಂತ್ರಿ ಸ್ಥಾನ ಆನಂತರದ ಮಾತು. ನನ್ನ ಕಡೆಯಿಂದ ಕೇಂದ್ರಕ್ಕೆ ಯಾವ ಮುಜುಗರವೂ ಇರುವುದಿಲ್ಲ. ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ. ರಾಜ್ಯದ ಎಲ್ಲ ಸಂಸದರ ಜತೆ ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಶಿಕ್ಷಕರ ಕ್ಷೇತ್ರದ ಗೆಲುವಿಗೆ ಸಂತಸ: ಶಿಕ್ಷಕರ ಕ್ಷೇತ್ರಗಳಿಂದ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾದ ಎಸ್.ಎಲ್.ಭೋಜೆಗೌಡ ಮತ್ತು ಕೆ.ವಿವೇಕಾನಂದ ದೊಡ್ಡ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಜಯ ಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಮೈತ್ರಿ ಶಕ್ತಿ ಏನು ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಾಗಿದೆ ಎಂದರು.