ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಬಹಿರಂಗಪಡಿಸಿದ ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಚುನಾವಣೆಗೆ ಮೊದಲು ಡಿಕೆ ಸಹೋದರರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾದಿ ಬೀದಿಯಲ್ಲಿ ಬೈದಾಡಿಕೊಂಡಿದ್ದರು. ಈಗ ಪರಸ್ಪರ ಅಪ್ಪಿಕೊಂಡು ನಾಟಕ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗುರುವಾರ ಚನ್ನಪಟ್ಟಣದ ವಿರೂಪಾಕ್ಷಿಪುರ ಗ್ರಾಮದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್, ಯೋಗೇಶ್ವರ್ ಗೆ ಬೈದಿರುವ ಆಡಿಯೋ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನ ಬೆಳಗ್ಗೆ ಯೋಗೇಶ್ವರ್ ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗಾಡುವ ಡಿ.ಕೆ.ಸುರೇಶ್ ಅವರು ಯೋಗೇಶ್ವರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದರು.
ವಿಧಾನಸಭೆಯಲ್ಲಿ ಚುನಾವಣಾ ವ್ಯವಸ್ಥೆ ಸುಧಾರಣೆ ಬಗ್ಗೆ ನಾನು ಮಾತನಾಡಿರುವ ಆಡಿಯೋವನ್ನು ಎಷ್ಟು ಬೇಕೋ ಅಷ್ಟು ಕತ್ತರಿಸಿ ಜನರಿಗೆ ಕೇಳಿಸುತ್ತಿದ್ದಾರೆ. ಆ ವ್ಯಕ್ತಿಗೆ ನಾನು ಹೇಳಲು ಇಚ್ಛಿಸುತ್ತೇನೆ, ನಾನು ಮಾಡಿರುವ ಆಡಿಯೋ ಹತ್ತು ಹದಿನೈದು ನಿಮಿಷ ಇದೆ. ಅಷ್ಟನ್ನೂ ಕೇಳಿಸಲಿ ಎಂದು ಅವರು ಸವಾಲು ಹಾಕಿದರು.
ಜನರ ಆಶೀರ್ವಾದದಿಂದ ನಿಖಿಲ್ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಅವರು ವಿಧಾನಸೌಧಕ್ಕೆ ಹೋಗಿಯೇ ಹೋಗುತ್ತಾರೆ. ವಿಧಾನಸಭೆಯಲ್ಲಿ ಅಭಿವೃದ್ಧಿ ಎಂದರೇನು ಎಂದು ನಿಖಿಲ್ ವಿಧಾನಸಭೆ ಕಲಾಪದಲ್ಲಿ ಚರ್ಚೆ ಮಾಡುತ್ತಾರೆ. ಇವರ ಎಲ್ಲ ಟೀಕೆಗೂ ನಿಖಿಲ್ ವಿಧಾನಸಭೆಗೆ ಪ್ರವೇಶ ಮಾಡಿ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.
ಆಡಿಯೋದಲ್ಲಿ ಏನಿದೆ? :
“ಸಿ.ಪಿ.ಯೋಗೇಶ್ವರ್, ಯಾರು ಯಾರಿಗೆ ಟೋಪಿ ಹಾಕಿದ್ದಾನೆ, ಬಿಡದಿಯಲ್ಲಿ ಹೋಗಿ ಕೇಳಿದರೆ ಎಲ್ಲ ಹೇಳುತ್ತಾರೆ. ಬಿಡದಿಯಲ್ಲಿ ಎಲ್ಲರಿಗೂ ಮೆಗಾಸಿಟಿ ಮಾಡುತ್ತೇನೆ ಅಂತ ಟೋಪಿ ಹಾಕಿದ್ದನ್ನಲ್ಲ ಮರೆತೋಗಿದ್ದಾನಾ?” ಎಂದು ಡಿ.ಕೆ.ಸುರೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದರು.