ಜೆಡಿಎಸ್ ಅಸ್ತಿತ್ವದಲ್ಲಿಲ್ಲ ಎಂದು ಅವರೇ ಸಾಬೀತುಪಡಿಸಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: "ಜೆಡಿಎಸ್ ಪಕ್ಷ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ಆ ಪಕ್ಷ ಅಸ್ತಿತ್ವದಲ್ಲಿದ್ದರೆ ದೇವೇಗೌಡರ ಅಳಿಯನನ್ನು ಜೆಡಿಎಸ್ ಅಭ್ಯರ್ಥಿ ಮಾಡುತ್ತಿದ್ದರು” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕುಮಾರಪಾರ್ಕ್ ನಲ್ಲಿನ ತಮ್ಮ ಸರ್ಕಾರಿ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಯಾರಾದರೂ ತಮ್ಮದೇ ಪಕ್ಷ ಇಟ್ಟುಕೊಂಡು ತಮ್ಮ ಕುಟುಂಬದವರನ್ನು ಬೇರೆ ಪಕ್ಷದಿಂದ ಕಣಕ್ಕಿಳಿಸುತ್ತಾರಾ?. ಆ ಪಕ್ಷ ಇರಬೇಕು, ಪ್ರಬಲ ವಿರೋಧ ಪಕ್ಷವಾಗಬೇಕು ಎಂಬುದು ನಮ್ಮ ಆಸೆ. ಆದರೆ ಅವರೇ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿಕೊಳ್ಳುತ್ತಿದ್ದಾರೆ. ದೇಶದ ಪ್ರಧಾನಿಯಾದವರು, ಎರಡು ಬಾರಿ ಮುಖ್ಯಮಂತ್ರಿಯಾದವರು ಇರುವ ಪಕ್ಷವನ್ನು ವಿಲೀನ ಮಾಡುತ್ತಿರುವುದನ್ನು ನೋಡಿ ಬೇಸರವಾಗುತ್ತಿದೆ.” ಎಂದರು.
“1823 ಕೋಟಿ ಕಟ್ಟಬೇಕು ಎಂದು ದೇಶದ ಐಟಿ ಇಲಾಖೆ ಎಐಸಿಸಿಗೆ ನೋಟೀಸ್ ನೀಡಿದೆ. ವಿರೋಧ ಪಕ್ಷಗಳ ಮೇಲೆ ಈ ರೀತಿ ದಾಳಿ ಮಾಡಲಾಗುತ್ತಿದೆ. ದೇವೇಗೌಡರು ಐಟಿ ಅಧಿಕಾರಿಯೇ? ಅವರು ಆರೋಪ ಮಾಡಬೇಕು, ಅದಕ್ಕಾಗಿ ಮಾಡಿದ್ದಾರೆ. ನಾವು ಕೂಡ ಅವರ ಮೇಲೆ ಆರೋಪ ಮಾಡಬಹುದು. ಅವರ ಆರೋಪ ನಿರಾಧಾರ. ನಾವು ಯಾರಿಗೂ ದುಡ್ಡು ಕಟ್ಟುವ ಅಗತ್ಯವಿಲ್ಲ. ನಮ್ಮ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಅದರಲ್ಲಿದ್ದ ಹಣವನ್ನು ಕದ್ದಿದ್ದಾರೆ. ನಮ್ಮ ಪಕ್ಷ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ ಎಂಬುದು ಅವರಿಗೆ ಅರಿವಾಗಿದೆ. ಹೀಗಾಗಿ ಅಸೂಯೆಯಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದರು.
ಬಿಜೆಪಿ ಅಸಮಾಧಾನಿತ ನಾಯಕ ಕರಡಿ ಸಂಗಣ್ಣ ಅವರು ನಿಮ್ಮನ್ನು ಹಾಗೂ ಮುಖ್ಯಮಂತ್ರಿಗಳನ್ನು ಸಂಪರ್ಕ ಮಾಡಿದ್ದಾರೆಯೇ ಎಂದು ಕೇಳಿದಾಗ, “ನಮ್ಮನ್ನು ಅನೇಕ ನಾಯಕರು ಸಂಪರ್ಕ ಮಾಡಿದ್ದಾರೆ. ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ನಮ್ಮ ಪಕ್ಷಕ್ಕೆ ಸೇರಲು ಬಯಸಿ ಬಿಜೆಪಿ ಹಾಗೂ ಜೆಡಿಎಸ್ ನ ಪ್ರಮುಖ ನಾಯಕರು ಮುಂದಾಗಿದ್ದಾರೆ” ಎಂದು ತಿಳಿಸಿದರು.