ನನ್ನನ್ನು ಕಾಪಾಡಿ ಎಂದು ಹೈಕೋರ್ಟ್ ಮುಂದೆ ಅಂಗಲಾಚಿದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್
ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್ಪಿ ಸೇರಿದಂತೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ನಾನು ಕೋರ್ಟ್ ಬಿಟ್ಟು ಹೋಗುವುದಿಲ್ಲ. ನನ್ನನ್ನು ಕಾಪಾಡಿ ಎಂದು ಸಾಗರದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಶಾಂತಕುಮಾರ್ ಎಂಬವರು ಹೈಕೋರ್ಟ್ ಮುಂದೆ ಕೈಮುಗಿದು ಅಂಗಲಾಚಿ ಮನವಿ ಮಾಡಿಕೊಂಡ ಘಟನೆ ಮಂಗಳವಾರ ವರದಿಯಾಗಿದೆ.
ಬೆಳಗಿನ ಕಲಾಪ ಮುಗಿಯುತ್ತಿದ್ದಂತೆ ಊಟಕ್ಕೆ ತೆರಳಲು ಸಿದ್ಧರಾದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದ ಸಹಾಯಕ ಎಂಜಿನಿಯರ್ ಆಗಿರುವ ಶಾಂತಕುಮಾರ್ ಸ್ವಾಮಿ ಎಂ.ಜಿ ಅವರು ಕೈಮುಗಿದು ಹಾಜರಾದರು.
“ನನಗೆ ವಿವಾಹ ನಿಶ್ಚಯವಾಗಿ ರದ್ದಾಗಿತ್ತು. ಆನಂತರ ಸುಳ್ಳು ಪ್ರಕರಣ ದಾಖಲಿಸಿ, ನನ್ನಿಂದ ಹಣಕ್ಕೆ ಸ್ಥಳೀಯ ಶಾಸಕರು ಮತ್ತು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನಾನು ರೆಕಾರ್ಡ್ ಮಾಡಿ, ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ನನ್ನ ಮೇಲೆ ಸುಳ್ಳು ಗಾಂಜಾ ಪ್ರಕರಣ ದಾಖಲಿಸಿದರು. ಬೆಂಗಳೂರಿಗೆ ವರ್ಗಾವಣೆ ಕೋರಿದರೂ, ಅದೂ ಸಾಧ್ಯವಾಗಿಲ್ಲ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೇ ಸುಳ್ಳು ಗಾಂಜಾ ಪ್ರಕರಣದಲ್ಲಿ ಬಂಧಿಸಿ ಶಿವಮೊಗ್ಗ ಜೈಲಿಗೆ ಅಟ್ಟಿದ್ದನ್ನು ವಿವರಿಸಿದರು.
“ಸಾಗರದ ಡಿವೈಎಸ್ಪಿ ನನ್ನನ್ನು ದಂಡಿಸಿ ಗಾಂಜಾ ಪ್ರಕರಣದ ಜೊತೆಗೆ ಬೇರೆ ಬೇರೆ ಕೇಸು ಸೇರಿಸಿದ್ದಾರೆ. ಅಲ್ಲದೇ ರಿವಾಲ್ವಾರ್ ಇಟ್ಟು ಎನ್‌ಕೌಂಟರ್ ಮಾಡಲಾಗುವುದು ಎಂದು ಬೆದರಿಸಿದ್ದಾರೆ. ರೌಡಿ ಶೀಟರ್ ತೆರೆಯಲಾಗುವುದು ಎಂದು ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡಿದ್ದಾರೆ” ಎಂದು ಕಣ್ಣೀರಾದರು.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಇಡೀ ಘಟನೆಯನ್ನು ಆಲಿಸಿ ಇಂಥ ಕೃತ್ಯದಿಂದ ಹಿಂದೆ ಸರಿಯುವಂತೆ ಡಿವೈಎಸ್ಪಿಗೆ ತಿಳಿಸಿ, ಇಲ್ಲವಾದರೆ ಅವರನ್ನು ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಪ್ರಾಸಿಕ್ಯೂಟರ್ ಬಿ ಎನ್ ಜಗದೀಶ್ ಅವರಿಗೆ ಹೇಳಿದರು. ಆರೋಪ ನಿಜವಾಗಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೌಖಿಕ ಎಚ್ಚರಿಕೆ ನೀಡಿದರು. ಡಿವೈಎಸ್ಪಿ ಈ ರೀತಿ ನಡೆದುಕೊಂಡಿದ್ದರೆ ಖಂಡಿತಾಗಿಯೂ ಅವರ ಮೇಲೆ ಕ್ರಮಕ್ಕೆ ನಿರ್ದೇಶಿಸಲಾಗುವುದು. ಘಟನೆ ಸುಳ್ಳಾಗಿದ್ದರೆ ನೀವೂ ಕ್ರಮ ಎದುರಿಸಬೇಕಾಗುತ್ತದೆ. ನಾಳೆ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಹೇಳಿ, ವಿಚಾರಣೆ ಮುಂದೂಡಿದರು.