ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ನಿರ್ಮಲಾ ಸೀತಾರಾಮನ್/ನಳೀನ್ ಕುಮಾರ್ ಕಟೀಲ್
ಬೆಂಗಳೂರು: ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನ್ ಕುಮಾರ್ ಕಟೀಲ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಳಿನ್ ಕುಮಾರ್ ಕಟೀಲ್ ಮತ್ತಿತರರ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ನಡೆಸಿತು.
ಈ ವೇಳೆ ದೂರುದಾರ ಆದರ್ಶ್ ಅಯ್ಯರ್ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ಈಡಿಯನ್ನು ಬಳಸಿಕೊಂಡು ಚುನಾವಣಾ ಬಾಂಡ್ಗೆ ಹಣ ಸಂಗ್ರಹಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ವಿರುದ್ಧ ಈ ಆರೋಪವಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ದೂರು ದಾಖಲಿಸಲಾಗಿದೆ. ಆಡಳಿತ ಪಕ್ಷ ಸಿಬಿಐ, ಈಡಿಯನ್ನು ಬಳಸಿ ಹಣ ಸುಲಿಗೆ ಮಾಡುತ್ತಿದೆ. ಪ್ರತಿ ನಾಗರಿಕನೂ ಇದರಿಂದ ನೊಂದಿರುವುದರಿಂದ ದೂರು ದಾಖಲಿಸಬಹುದೆಂದು ವಾದ ಮಂಡಿಸಿದರು.
ಇದಕ್ಕೆ ನಳಿನ್ ಕುಮಾರ್ ಕಟೀಲ್ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಪ್ರತಿವಾದ ಮಂಡಿಸಿ, ಸುಲಿಗೆಗೊಳಗಾದ ಸಂತ್ರಸ್ತರು ಯಾರೂ ದೂರು ನೀಡಿಲ್ಲ. ದೂರುದಾರರು ಈ ಕೇಸಿನಲ್ಲಿ ಸಂತ್ರಸ್ತರಲ್ಲದಿರುವುದರಿಂದ ದೂರು ದಾಖಲಿಸುವಂತಿಲ್ಲ. ಆರೋಪಿಗಳು ಹಣ ಸ್ವೀಕರಿಸಿದ್ದಾರೆಂಬುವುದಕ್ಕೂ ದೂರಿನಲ್ಲಿ ಯಾವುದೇ ಚಕಾರವಿಲ್ಲ. ಹೀಗಾಗಿ ಸುಲಿಗೆ ವ್ಯಾಖ್ಯಾನಕ್ಕೆ ದೂರು ಒಳಪಡುವುದಿಲ್ಲ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.