ಹುಬ್ಬಳ್ಳಿ ಗಲಭೆ ಪ್ರಕರಣ ಸಹಿತ 43 ಕ್ರಿಮಿನಲ್ ಕೇಸ್ ವಾಪಸ್ ಪಡೆಯುವ ವಿಚಾರ : ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಹುಬ್ಬಳ್ಳಿ ಗಲಭೆ ಪ್ರಕರಣ ಸಹಿತ 43 ಕ್ರಿಮಿನಲ್ ಕೇಸ್ ಹಿಂಪಡೆಯುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಕುರಿತು ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನಗರದ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸರಕಾರದ ಕ್ರಮ ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ, ಹುಬ್ಬಳ್ಳಿ ಗಲಭೆ ಪ್ರಕರಣ ಸಹಿತ 43 ಕೇಸ್ ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಸಿಆರ್ ಪಿಸಿಯ ನಿಯಮ ಉಲ್ಲಂಘಿಸಿ ಕೇಸ್ ಹಿಂಪಡೆದಿದೆ ಎಂದು ವಾದ ಮಂಡಿಸಿದರು.
ಸರಕಾರ ತನ್ನ ವ್ಯಾಪ್ತಿ ಮೀರಿ ಕ್ರಮ ಕೈಗೊಂಡಿದೆ. ಸಚಿವ ಸಂಪುಟದ ಕ್ರಮ ನಿಯಮ ಬಾಹಿರವಾಗಿದ್ದರೆ ಕೋರ್ಟ್‌ಗಳು ಒಪ್ಪುವುದಿಲ್ಲ. ಕೇಸ್ ಹಿಂಪಡೆಯಲು ಅನುಮತಿ ನೀಡಲು ಒಪ್ಪುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ, ನ್ಯಾ. ಎಂ.ಐ. ಅರುಣ್ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿ, ಮಾ.17ಕ್ಕೆ ವಿಚಾರಣೆ ಮುಂದೂಡಿದೆ.