ಎಇಇ ನೇಮಕದಲ್ಲಿ ಅಕ್ರಮ ಆರೋಪ: ಸಿಬಿಐ ತನಿಖೆಗೆ ಹೈಕೋರ್ಟ್ ಇಂಗಿತ

ಬೆಂಗಳೂರು: ಕೆಪಿಎಸ್‌ಸಿಯಿಂದ 24 ಎಇಇ ನೇಮಕದಲ್ಲಿ ಅಕ್ರಮ ಆರೋಪ ಪ್ರಕರಣವನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.
ನೇಮಕಾತಿ ಪ್ರಶ್ನಿಸಿ ಸಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯ ಪೀಠ, ಕೆಪಿಎಎಸ್‌ಸಿ ಹಗರಣದ ಸಿಬಿಐ ತನಿಖೆಗೆ ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿ, ಸಿಬಿಐಯನ್ನು ಪ್ರತಿವಾದಿ ಮಾಡಲು ನಿಮ್ಮ ಆಕ್ಷೇಪವಿದೆಯೇ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿ, ಸಿಬಿಐ ತನಿಖೆಗೆ ವಹಿಸುವ ಬಗ್ಗೆ ನಿಲುವು ತಿಳಿಸಲು ಸರಕಾರಕ್ಕೆ ಸೂಚನೆ ನೀಡಿದೆ.
ಮಾ.19ರಂದು ನಡೆಯುವ ವಿಚಾರಣೆ ವೇಳೆ ಸಿಬಿಐ ಪರ ವಕೀಲರು ಹಾಜರಾಗಲು ಹೈಕೋರ್ಟ್ ಸೂಚಿಸಿದೆ. ವಿಚಾರಣೆ ವೇಳೆ ಕೆಪಿಎಸ್‌ಸಿ ಕಾರ್ಯವೈಖರಿಗೂ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ನಡವಳಿಕೆ ನಿಲ್ಲಬೇಕು. ನಮಗೆ ನಾವೇ ಕಾನೂನು ಎಂದು ಭಾವಿಸಲು ಬಿಡುವುದಿಲ್ಲ. ಅಕ್ರಮಗಳ ಬಗ್ಗೆ ದೂರು ನೀಡಬೇಕೆಂಬ ಕೆಪಿಎಸ್‌ಸಿ ನಿರ್ಣಯ ಏನಾಯಿತು?. ನಿರ್ಣಯ ಪಾಲಿಸದ ಕೆಪಿಎಸ್‌ಸಿ ಕಾರ್ಯದರ್ಶಿ ಮೇಲೆ ಕ್ರಮವೇಕಿಲ್ಲ. ಕಾರ್ಯದರ್ಶಿ ಮಹಾರಾಜ ಅಲ್ಲ ಎಂದು ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ಈ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಪ್ರಮಾಣಪತ್ರಕ್ಕೆ ನ್ಯಾ.ಕೃಷ್ಣ ಎಸ್. ದೀಕ್ಷಿತ್, ನ್ಯಾ.ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಪೀಠ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.