ವಿದ್ಯಾರ್ಥಿನಿಗೆ ಸಿಎ ಅಭ್ಯಾಸ ನಡೆಸಲು ಅನುಮತಿ ನೀಡುವಂತೆ ಐಸಿಎಐಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ವಿದ್ಯಾರ್ಥಿಗಳು ಹೆಚ್ಚು ಬುದ್ಧಿವಂತರಾಗಿದ್ದರೆ ಆಯಾ ಸಂಸ್ಥೆ ಮತ್ತು ಸಮಾಜಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಚಾರ್ಟರ್ಡ್ ಅಕೌಂಟೆಂಟ್(ಸಿಎ) ಜತೆಗೆ ವಿವಿಧ ಕೋರ್ಸ್‍ಗಳನ್ನು ಅಧ್ಯಯನ ಮಾಡಿದ್ದ ವಿದ್ಯಾರ್ಥಿಯೊಬ್ಬರಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಅಭ್ಯಾಸ ನಡೆಸಲು ಅನುಮತಿ ನೀಡುವಂತೆ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ (ಐಸಿಎಐ)ಗೆ ನಿರ್ದೇಶನ ನೀಡಿದೆ.
ಸಿಎ ಅಭ್ಯಾಸ ಮಾಡುವುದಕ್ಕೆ ಅನುಮತಿ ನೀಡದ ಐಸಿಎಐ ಕ್ರಮ ಪ್ರಶ್ನಿಸಿ ಬೆಂಗಳೂರಿನ 23 ವರ್ಷದ ಕೆ.ಜೆ.ನಿಕಿತಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ಏಕ ಕಾಲಕ್ಕೆ ಹಲವು ಕೋರ್ಸ್‍ಗಳನ್ನು ಪೂರ್ಣಗೊಳಿಸಿರುವ ಬುದ್ಧಿವಂತ ವಿದ್ಯಾರ್ಥಿಯನ್ನು ಸಿಎ ಆಗಿ ಅಭ್ಯಾಸ ನಡೆಸಲು ನಿಯಂತ್ರಿಸುವುದು ಆಶ್ಚರ್ಯಕರವಾಗಿದೆ. ಅಲ್ಲದೆ, ಅರ್ಜಿದಾರರು ಪ್ರತಿಯೊಂದು ಕೋರ್ಸ್ ಮಾಡುವುದಕ್ಕೂ ಐಸಿಎಐನಿಂದ ಅನುಮತಿ ಪಡೆದಿದ್ದಾರೆ. ಐಸಿಎಐ ಅದಕ್ಕೆ ಅನುಮತಿಯನ್ನೂ ನೀಡಿದೆ. ಆದರೆ, ಇದೀಗ ಅದನ್ನು ಬದಲಾಯಿಸಲು ಮುಂದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ವಿದ್ಯಾರ್ಥಿ ಸರಿಯಾದ ರೀತಿಯಲ್ಲಿ ಅನುಮತಿ ಕೋರಿಲ್ಲ. ನೀಡಿರುವ ಅನುಮತಿ ಸರಿಯಿಲ್ಲ ಎಂಬುದಾಗಿ ಐಸಿಎಐ ತಿಳಿಸುವ ಮೂಲಕ ವಿದ್ಯಾರ್ಥಿನಿ ಜೀವನವನ್ನು ಅಪಾಯಕ್ಕೆ ತಳ್ಳುವುದಕ್ಕೆ ಮುಂದಾಗಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿನಿಗೆ ಕಾನೂನಿಗೆ ಸಂಬಂಧಿಸಿದ ಪರಿಣಾಮಗಳು ಅರಿವಿರುವುದಿಲ್ಲ. ಒಬ್ಬ ಅವರಿಗೆ ಅಧ್ಯಯನ ಮಾಡಲು ಮತ್ತು ಸಾಮಗ್ರಿಗಳ ಬಗ್ಗೆ ಯೋಜಿಸಲು ಮಾತ್ರ ತಿಳಿದಿರುತ್ತದೆ. ಅನುಮತಿ ಪಡೆದು ಅಧ್ಯಯನವನ್ನು ಮಾತ್ರ ನಡೆಸಿದ್ದರೂ ವಿದ್ಯಾರ್ಥಿನಿಗೆ ತೊಂದರೆ ನೀಡುವುದಕ್ಕೆ ಮುಂದಾಗಿರುವ ಐಸಿಎಐ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿರಲು ಅರ್ಹವಿಲ್ಲ ಎಂದು ಪೀಠ ಹೇಳಿದೆ.