ಬೆಂಗಳೂರು | ಹೈಕೋರ್ಟ್ ವಕೀಲೆ ಆತ್ಮಹತ್ಯೆ
ಚೈತ್ರಾ ಬಿ.ಗೌಡ(35)
ಬೆಂಗಳೂರು : ಇಲ್ಲಿನ ಸಂಜಯನಗರ ಪೋಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಹೈಕೋರ್ಟ್ ವಕೀಲೆ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವರದಿಯಾಗಿದೆ.
ಚೈತ್ರಾ ಬಿ.ಗೌಡ(35) ಮೃತಪಟ್ಟಿರುವ ಮಹಿಳೆ ಎಂದು ಗುರುತಿಸಲಾಗಿದೆ. ಹೈಕೋರ್ಟ್ನಲ್ಲಿ ವಕೀಲೆ ಆಗಿದ್ದ ಇವರು, ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಯ್ಯ ಲೇಔಟ್ನಲ್ಲಿ ವಾಸವಾಗಿದ್ದರು. ಮಹಿಳೆಯ ಪತಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ (ಕೆಐಡಿಬಿ) ಅಸಿಸ್ಟಂಟ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಚೈತ್ರಾ, ಪ್ರವೃತ್ತಿಯಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 11ರ ಶನಿವಾರ ಬೆಳಗ್ಗೆ ಮನೆಯಲ್ಲಿರುವ ಫ್ಯಾನ್ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮನೆಯವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಮನೆಯವರು ಸಾವಿಗೆ ಗಂಡನೇ ಕಾರಣ ಎಂದು ಆರೋಪಿಸಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ಪ್ರತಿಕ್ರಿಯಿಸಿದ್ದು, ಕೆಎಎಸ್ ಅಧಿಕಾರಿಯ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದೆ. ಸೀರೆಯಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಆಗಿದೆ. ಇದರ ಬಗ್ಗೆ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಒಂದು ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿರುವುದು ಗೊತ್ತಾಗಿದೆ. ಅದನ್ನು ಅವರೇ ಬರೆದಿದ್ದಾರಾ ಎಂಬುದಾಗಿ ಪರಿಶೀಲನೆ ನಡೆಯುತ್ತಿದ್ದು, ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
3 ತಿಂಗಳ ಹಿಂದೆ ಬರೆದಿಟ್ಟಿದ್ದ ನೋಟ್ ಪತ್ತೆ: ಚೈತ್ರಾ ಅವರ ಮನೆಯಲ್ಲಿ ಮಾ.11ರಂದು ಬರೆದಿದ್ದ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ‘ನನ್ನ ಗಂಡ ಒಳ್ಳೆಯವರು, ಜೀವನ ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನಿಸಿದೆ ಆಗಲಿಲ್ಲ, ಹಾಗಾಗಿ ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆ. ಮಗು ಚೆನ್ನಾಗಿ ನೋಡಿಕೊಂಡು ಜೀವನ ಎಂಜಾಯ್ ಮಾಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ. ಆದರೂ, ನನ್ನ ಜೀವನ ಅಂತ್ಯ ಮಾಡುತ್ತಿದ್ದೇನೆ’ ಎಂದು ಬರೆದಿರುವುದಾಗಿ ತಿಳಿದುಬಂದಿದೆ.