ಬಿಬಿಎಂಪಿ ಕಟ್ಟಡಗಳ ಮೇಲೆ ಚುನಾಯಿತ ಪ್ರತಿನಿಧಿಗಳ ಚಿತ್ರ ಪ್ರಕಟ ವಿಚಾರ: ರಾಜ್ಯ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಬಿಬಿಎಂಪಿ ಮಾಲಕತ್ವದ ಕಟ್ಟಡಗಳಲ್ಲಿ ಚುನಾಯಿತ ಪ್ರತಿನಿಧಿಗಳ ಚಿತ್ರ ಪ್ರಕಟಿಸಿರುವುದಕ್ಕೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಕುರಿತಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಗೋವಿಂದರಾಜ ನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಬಿಎಂಪಿ ಅನುದಾನದಲ್ಲಿ ಬಿಬಿಎಂಪಿ ಮಾಲಕತ್ವದ ಆಡಳಿತಾತ್ಮಕ ಕಟ್ಟಡ, ಉದ್ಯಾನ, ಧ್ಯಾನ ಮಂದಿರ, ಕ್ರೀಡಾಂಗಣದಲ್ಲಿ ಹಾಲಿ ಶಾಸಕರಾದ ಪ್ರಿಯಕೃಷ್ಣ ಮತ್ತು ಎಂ ಕೃಷ್ಣಪ್ಪ ಅವರ ಚಿತ್ರ ತೆರವು ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಮೂಡಳಪಾಳ್ಯದ ಶಿವಾನಂದ ನಗರದ ನಿವಾಸಿ ಎಚ್ ಎಂ ಆರ್ತೀಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಿ ಪೀಠವು ವಿಚಾರಣೆ ಮುಂದೂಡಿದೆ.
ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಇಲಾಖಾ ಸಚಿವರು ಚಿತ್ರಗಳನ್ನು ಹೊರತುಪಡಿಸಿ, ಸಂಸದರು, ಶಾಸಕರು ಸೇರಿದಂತೆ ಬೇರೆ ಯಾರದೂ ಚಿತ್ರಗಳನ್ನು ಸರ್ಕಾರದ ಕಟ್ಟಡಗಳಲ್ಲಿ ಪ್ರಕಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅದಾಗ್ಯೂ, ಪ್ರಿಯಕೃಷ್ಣ ಮತ್ತು ಕೃಷ್ಣಪ್ಪ ಅವರ ಚಿತ್ರಗಳನ್ನು ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳಲ್ಲಿ ಬಳಕೆ ಮಾಡಿರುವ ವಿಚಾರವನ್ನು ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ಅವರಾರೂ ಕ್ರಮಕೈಗೊಂಡಿಲ್ಲ ಎಂದು ಅರ್ಜಿದಾರರು ಆಕ್ಷೇಪಿದ್ದಾರೆ. ವಿಚಾರವನ್ನು ಗಮನಕ್ಕೆ ತಂದರೂ ಕ್ರಮಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಲಾಗಿದೆ.