ಗಾಂಧಿ ಸ್ಮಾರಕ ನಿಧಿಯ 75ನೆ ವರ್ಷದ ಸಂಸ್ಮರಣೆ | ‘21ನೆ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ಅಂತರರಾಷ್ಟ್ರೀಯ ವಿಚಾರ ಸಂಕಿರಣ : ಎಚ್.ಕೆ.ಪಾಟೀಲ್
ಬೆಂಗಳೂರು : ಹೊಸದಿಲ್ಲಿಯಲ್ಲಿ ಸ್ಥಾಪಿಸಲಾದ ಗಾಂಧಿ ಸ್ಮಾರಕ ನಿಧಿಯ 75ನೆ ವರ್ಷದ ಸಂಸ್ಮರಣೆ ಅಂಗವಾಗಿ ಆ.24 ಮತ್ತು 25ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಕರ್ನಾಟಕ ಹಾಗೂ ಹೊಸದಿಲ್ಲಿಯ ಗಾಂಧಿ ಸ್ಮಾರಕ ನಿಧಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘21ನೆ ಶತಮಾನಕ್ಕೆ ಮಹಾತ್ಮ ಗಾಂಧಿ-ಭವಿಷ್ಯದ ಶಾಂತಿ, ನ್ಯಾಯ, ಸೋದರತ್ವ ಮತ್ತು ಸುಸ್ಥಿರ ಅಭಿವೃದ್ಧಿಯ ನಿರ್ಮಾಣ’ ವಿಷಯದ ವಿಚಾರ ಸಂಕಿರಣವು ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಮತ್ತು ಆಚರಣೆಗಳನ್ನು ಕೇಂದ್ರೀಕರಿಸಿದ್ದರೂ ಭಿನ್ನ ವಿಚಾರಗಳು, ದೃಷ್ಟಿಕೋನಗಳು ಮತ್ತು ಗಂಭೀರ ಚರ್ಚೆಗಳಿಗೆ ವಿಶಾಲ ವೇದಿಕೆಯನ್ನು ಕಲ್ಪಿಸಲಿದೆ ಎಂದು ಹೇಳಿದರು.
ಗಾಂಧೀಜಿ ಪ್ರತಿಪಾದಿಸಿದ ಚಿಂತನೆಗಳು ಮತ್ತು ಕಾಳಜಿಗಳು ಇಂದು ಮಾನವೀಯತೆ ಎದುರಿಸುತ್ತಿರುವ ಸವಾಲುಗಳೊಂದಿಗೆ ಗಾಢವಾಗಿ ಅನುರಣಿಸುತ್ತದೆ. ಆದುದರಿಂದ, ಇವೆಲ್ಲವನ್ನೂ ಒಗ್ಗೂಡಿಸಿ ದೇಶ, ವಿದೇಶಗಳ ಚಿಂತನೆಗಳನ್ನು ಗಾಂಧಿವಾದಿಗಳು, ತಂತ್ರಜ್ಞರು ಮತ್ತು ಚಿಂತಕರನ್ನು ಸೇರಿಸಿ ಚರ್ಚೆ ಮತ್ತು ಸಂವಾದ ನಡೆಸುವುದು ಅಗತ್ಯವಾಗಿದ್ದು. ಈ ವಿಚಾರ ಸಂಕಿರಣ ಅಂತಹ ಚರ್ಚೆಗಳಿಗೆ ವೇದಿಕೆಯನ್ನು ಒದಗಿಸಲು ಪ್ರಯತ್ನಿಸುತ್ತದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಆರು ವಿಷಯಾಧಾರಿತ ಚರ್ಚೆಗಳು ನಡೆಯಲಿವೆ: 1.ಗಾಂಧಿ ಸಂಘರ್ಷ ನಿರ್ಣಯ ಮತ್ತು ಶಾಂತಿ ನಿರ್ಮಾಣ, 2. ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಗಾಗಿ ಗಾಂಧೀಜಿ, 3. ಗಾಂಧಿ, ಪ್ರಜಾತಂತ್ರ ಮತ್ತು ಭಿನ್ನಾಭಿಪ್ರಾಯ, 4. ಗಾಂಧಿ ಮೌಲ್ಯಗಳು ಮತ್ತು ತಂತ್ರಜ್ಞಾನದ ಕ್ರಾಂತಿಕಾರಿ ಶಕ್ತಿ :ಸಮ್ಮಳಿತ ಸಾಧ್ಯವೇ?, 5. ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧರ್ಮಗಳ ನಡುವಿನ ಸಂವಾದ ಹಾಗೂ 6. ಗಾಂಧಿ, ಜಾಗತೀಕರಣ ಮತ್ತು ಜಾಗತಿಕ ಆಳ್ವಿಕೆ. ವಿಚಾರ ಸಂಕಿರಣದಲ್ಲಿ ಈ ಆರು ವಿಷಯಾಧಾರಿತ ಚರ್ಚೆಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಚಾರ ಸಂಕಿರಣದಲ್ಲಿ 27 ಮಂದಿ ವಿಚಾರ ಮಂಡನೆ ಮಾಡಲಿದ್ದಾರೆ. ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ದಿಕ್ಸೂಚಿ ಭಾಷಣ ಮಾಡಲಿದ್ದು, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಕುಮಾರ್ ಪ್ರಶಾಂತ್ ದಿಕ್ಸೂಚಿ ಭಾಷಣ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಟೆಲಿಕಾಂ ಉದ್ಯಮದ ಪ್ರವರ್ತಕ ಸ್ಯಾಮ್ ಪಿತ್ರೋಡ, ಶ್ರೀಲಂಕಾದ ಸರ್ವೋದಯ ಶ್ರಮದಾನ ಸಂಸ್ಥೆಯ ಅಧ್ಯಕ್ಷ ವಿನಯ ಅರಿಯುರತ್ನ ವರ್ಚುಯಲ್ ಮೂಲಕ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಅಮೇರಿಕ, ಬಾಂಗ್ಲಾ, ಚೀನಾ, ದಕ್ಷಿಣ ಕೊರಿಯಾ ದೇಶಗಳಿಂದ ವಿಷಯ ಪಂಡಿತರು ಹಾಗೂ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ ದೇಶಗಳ 25 ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೆ ಪಿ.ಕೃಷ್ಣ, ಕಾರ್ಯಾಧ್ಯಕ್ಷ ಎನ್.ಆರ್.ವಿಶುಕುಮಾರ್, ಎಚ್.ಬಿ.ದಿನೇಶ್, ಎಂ.ಸಿ.ನರೇಂದ್ರ ಉಪಸ್ಥಿತರಿದ್ದರು.