ಕುವೆಂಪು ವಿಚಾರಧಾರೆಗಳ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಸಮಾಜ ನಿರ್ಮಾಣ ಸಾಧ್ಯ : ಎಚ್.ಕೆ.ಪಾಟೀಲ್
‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರದಾನ

ಬೆಂಗಳೂರು : ನಾಡು ಕಂಡ ಶ್ರೇಷ್ಠ ಸಾಹಿತಿ, ಜ್ಞಾನಪೀಠ ಪುರಸ್ಕೃತ ಕುವೆಂಪು ಅವರ ವಿಚಾರಧಾರೆಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸರಕಾರ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ, ಎಂ.ಚಂದ್ರಶೇಖರ್ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕುವೆಂಪು ಸಾಹಿತ್ಯ ಓದುಗರಲ್ಲಿ ಅಭಿಪ್ರಾಯ ಭೇದ ಬರಲು ಸಾಧ್ಯವಿಲ್ಲ. ಅವರ ಚಿಂತನೆ, ನಿಲುವುಗಳನ್ನು ನಾವು ಪರಿಪಾಲನೆ ಮಾಡಿದಾಗ ಮಾತ್ರ ಅವರ ಸಾಹಿತ್ಯ ನಮಗೆ ದಕ್ಕುತ್ತದೆ. ಕುಪ್ಪಳಿಯ ಕುವೆಂಪು ಅವರ ನಿವಾಸದಲ್ಲಿ ಸುಮಾರು 3 ಕೋಟಿ ರೂ.ಗೂ ಹೆಚ್ಚು ಪುಸ್ತಕಗಳನ್ನು ಕೊಳ್ಳುವ ಅವಕಾಶ ಜನರಿಗೆ ಸಿಕ್ಕಿರುವುದು ಸಾಹಿತ್ಯ ಕ್ಷೇತ್ರಕ್ಕೆ ಸಂದ ಗೌರವ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಗುಜರಾತಿ ಭಾಷೆಯ ಹಿರಿಯ ಸಾಹಿತಿ ಡಾ.ಹಿಮಾನ್ಷಿ ಇಂದುಲಾಲ್ ಶೆಲತ್ ಅವರಿಗೆ ಈ ಬಾರಿಯ ಕುವೆಂಪು ರಾಷ್ಟ್ರೀಯ ಪುರಸ್ಕಾರ ದೊರೆತಿರುವುದು ಸಂತಸ ತಂದಿದೆ. ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಸಾಹಿತ್ಯ ಸೇವೆ ಜೊತೆಗೆ ಜನಪರ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದೆ. ಈ ಪ್ರತಿಷ್ಠಾನಕ್ಕೆ ಇನ್ನಷ್ಟು ಬಲ ಬರಲಿ ಎಂದು ಶುಭ ಹಾರೈಸಿದರು.
ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಸಾಮಾಜಿಕ ಕ್ರಿಯಾಶೀಲತೆಯನ್ನು ನಾಡಿಗೆ ಎತ್ತಿ ತೋರಿಸಿದವರು ಕುವೆಂಪು. ಸೌಹಾರ್ದತೆ, ಸಮಾನತೆ ಜೊತೆಗೆ ಒಕ್ಕೂಟ ವ್ಯವಸ್ಥೆ ಪ್ರತಿಪಾದಿಸಿದರು. ಅವರ ವಿಚಾರಧಾರೆಗಳು, ಪ್ರಾಮಾಣಿಕತೆ, ಭಕ್ತಿಯಿಂದ ತುಂಬಿತ್ತು. ಅಲ್ಲದೇ ಅವರು ಜಾತಿ-ಧರ್ಮವನ್ನು ಮೀರಿ ಸೋದರತ್ವದ ಬೆಲೆ ತೋರಿಸಿಕೊಟ್ಟವರು ಎಂದು ತಿಳಿಸಿದರು.
ಕುವೆಂಪು ರಾಷ್ಟ್ರೀಯ ಪುರಸ್ಕೃತರಾದ ಸಾಹಿತಿ ಡಾ.ಹಿಮಾನ್ಷಿ ಇಂದುಲಾಲ್ ಶೆಲತ್ ಅವರ ಕುರಿತು ಪರಿಚಯ ನುಡಿಗಳನ್ನಾಡಿದ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಶೆಲತ್ ಅವರು ನೊಬೆಲ್ ಪುರಸ್ಕೃತರಾದ ವಿ.ಎಸ್.ನೈಪಾಲ್ ಅವರ ಕಾದಂಬರಿಗಳ ಕುರಿತಾಗಿ ಪಿ.ಎಚ್.ಡಿ. ಪ್ರಬಂಧ ಮಂಡಿಸಿದರು. ಸೂರತ್‍ನಲ್ಲಿ ಇಂಗ್ಲೀಷ್ ಉಪನ್ಯಾಸಕಿಯಾದ ಇವರ ಮೊದಲ ಕಥೆ ‘ಸಾತ್ ಪಗತಿಯ ಅಂದಾರ ಕೂವಮ’. ಇವರು ತಮ್ಮ ಕಥೆ, ಕಾದಂಬರಿ, ಪ್ರಬಂಧ, ಸಾಹಿತ್ಯ, ವಿಮರ್ಶೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. 1996 ರಲ್ಲಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಸಂದಿವೆ ಎಂದರು.
ಪ್ರಶಸ್ತಿ ಪುರಸ್ಕೃತರಾದ ಗುಜರಾತಿ ಭಾಷೆಯ ಸಾಹಿತಿ ಡಾ.ಹಿಮಾನ್ಷಿ ಇಂದುಲಾಲ್ ಶೆಲತ್ ಮಾತನಾಡಿ, ಕನ್ನಡ ಭಾಷೆಗೆ ಭವ್ಯ ಪರಂಪರೆ ಇದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ತಮಗೆ ಸಿಕ್ಕಿರುವುದು ಬಹಳ ಖುಷಿ ತಂದಿದೆ ಎಂದರು.
ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಕುವೆಂಪು ರಾಷ್ಟ್ರೀಯ ಪುರಸ್ಕಾರ 5 ಲಕ್ಷ ನಗದು, ಬೆಳ್ಳಿ ಪದಕ, ಪಾರಿತೋಷಕವನ್ನು ಒಳಗೊಂಡಿದ್ದು, ಇದು 12ನೇ ಪ್ರಶಸ್ತಿಯಾಗಿದೆ. ಪ್ರತಿಷ್ಠಾನವು ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಈಗಾಗಲೇ ನಿವೇಶನ ಗುರುತಿಸಲಾಗಿದ್ದು, ಅಲ್ಲಿ ಕುವೆಂಪು ಭವನ ನಿರ್ಮಿಸಲು ಸಿದ್ದವಿದೆ. ಇಲ್ಲಿ ಕುವೆಂಪು ವಿಚಾರಧಾರೆಗಳನ್ನು ಮುಂದಿನ ಪೀಳಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗುಜರಾತಿ ಸಾಹಿತಿ ಡಾ.ಹಿಮಾನ್ಷಿ ಶೆಲತ್ ರಚನೆಯ ಅಗ್ರಹಾರ ಕೃಷ್ಣಮೂರ್ತಿ ಕನ್ನಡ ಅನುವಾದದ ‘ರೆಕ್ಕೆ ಇಲ್ಲದ ಹಕ್ಕಿ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ನಂತರ ಕುವೆಂಪು ಪ್ರಶಸ್ತಿ ಪುರಸ್ಕೃತರ ಜೊತೆಗೆ ಸಂವಾದ ಹಾಗೂ ‘ಸಮಕಾಲೀನ ಸಂದರ್ಭದಲ್ಲಿ ಕುವೆಂಪು ಚಿಂತನೆಗಳು’ ವಿಷಯ ಕುರಿತು ಚರ್ಚೆ ನಡೆಯಿತು.
ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಎಂ.ಚಂದ್ರಶೇಖರ್ ಪ್ರತಿಷ್ಠಾನದ ಸರೋಜ ಎಂ.ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.